ಪಂಜಾಬ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಅಗ್ನಿವೀರ ಯೋಧ ಕಿರಣರಾಜ ಕೇದಾರಿ ತೆಲಸಂಗ (23) ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಗುರುವಾರ ಸಾಯಂಕಾಲ ನೆರವೇರಿತು.
ಕಳೆದ ಮಂಗಳವಾರ ಪಂಜಾಬ್ ಮಿಲಟರಿ ಯೂನಿಟ್ನಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಗ್ನಿವೀರ ಯೋಧ ಕಿರಣರಾಜ್ ಹೃದಯಾಘಾತದಿಂದ ನಿಧನ ಹೊಂದಿದರು.ತಹಸೀಲ್ದಾರ ಸಿದ್ದರಾಯ ಬೋಸಗಿ, ಸಿಪಿಐ ಸಂತೋಷ ಹಳ್ಳೂರ, ಕ್ಷೇತ್ರ ಶಿಕ್ಷನಾಧಿಕಾರಿ ಅವರ ನೇತೃತ್ವದಲ್ಲಿ ಅನೇಕ ಅಧಿಕಾರಿಗಳು, ಮಾಜಿ ಸೈನಿಕರು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವದಿಂದ ಬರಮಾಡಿಕೊಂಡರು. ಸೈನಿಕನ ತಂದೆ ಕೇದಾರಿ, ತಾಯಿ ರೇಣುಕಾ, ಅಜ್ಜ ಸತ್ಯಪ್ಪ, ಅಜ್ಜಿ ಯಲ್ಲವ್ವ, ಅಣ್ಣ ರವಿ, ಸಹೋದರಿ ನಿವೇದಿತಾ ಹಾಗೂ ಬಂಧು ಬಳದವರ ಆಕ್ರಂದನ ಮುಗಿಲು ಮುಟ್ಟಿತ್ತು. ತ್ರಿವರ್ಣ ಧ್ವಜಗಳನ್ನು, ಅಗ್ನಿವೀರ ಯೋಧ ಕಿರಣರಾಜ್ ಭಾವಚಿತ್ರ ಹಿಡಿದುಕೊಂಡು ನೂರಾರು ಯುವಕರು ಬೋಲೋ ಭಾರತ್ ಮಾತಾ ಕಿ ಜೈ, ಒಂದೇ ಮಾತರಂ, ಜೈ ಜವಾನ್ ಜೈ ಕಿಸಾನ್ , ಅಗ್ನಿವೀರ ಕಿರಣರಾಜ್ ಗೆ ಜಯವಾಗಲಿ ಎಂಬ ಘೋಷಣೆಗಳನ್ನುಮೊಳಗಿಸುತ್ವಿತಾ ವಿವಿಧ ಖಾಸಗಿ ವಾಹನಗಳು, ಶಾಲಾ ವಾಹನಗಳು, ಗ್ರಾಮದ ಟ್ಯಾಕ್ಟರ್ ಮಾಲೀಕರು ತಮ್ಮ ವಾಹನಗಳಿಗೆ ವೀರ ಯೋಧನ ಭಾವಚಿತ್ರ ಮತ್ತು ರಾಷ್ಟ್ರಧ್ವಜ ಹಿಡಿದು ರಾಷ್ಟ್ರೀಯ ಹಬ್ಬದ ಸಡಗರದಂತೆ ಸ್ವಾಭಿಮಾನದಿಂದ ಅಗ್ನಿವೀರ ಕಿರಣರಾಜ್ ಪಾರ್ಥಿವ ಶರೀರವನ್ನು ಐತಿಹಾಸಿಕ ಮೆರವಣಿಗೆ ಮೂಲಕ ಅಂತಿಮ ನಮನ ಸಲ್ಲಿಸಿದರು. ಪಂಜಾಬದ ಪಟಿಯಾಲ್ ರೆಜೀಮೆಂಟ್ ನಾಯಕ ಸುಭೇಧಾರ ಜಾಪರ್, ನಾಯಕ ಪ್ರದೀಪ್, ಹವಾಲ್ದಾರ್ ಚವ್ಹಾಣ, ನಾಯಕ ಸುಭೇದಾರ ಸುರೇಶ ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜವನ್ನ ಹೊಂದಿಸಿ ಸೇನಾಧಿಕಾರಿಗಳಿಂದ ಪುಷ್ಪ ನಮನ ಸಲ್ಲಿಸಿ ಶಸ್ತ್ರಾಸ್ತ್ರಗಳಿಂದ 5 ಸುತ್ತು ಮದ್ದು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದರು. ನಂತರ ರಾಷ್ಟ್ರಧ್ವಜವನ್ನು ಸೇನಾಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನಂತರ ಸಾರ್ವಜನಿಕರಿಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
