ಮಹಾದಾಯಿ ಯೊಜನೆ ಹಾಗೂ ರೈತರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಮಹದಾಯಿ ಯೋಜನೆ ಅನುಷ್ಠಾನ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಕ್ರಾಂತಿ ಹಾಗೂ ಶಿವಾನಂದ ಕರಿಗಾರ ಗೆಳೆಯರ ಬಳಗದ ವತಿಯಿಂದ ಬ್ಯಾಹಟ್ಟಿ ಗ್ರಾಮದಿಂದ ಹುಬ್ಬಳ್ಳಿಯ ತಹಶಿಲ್ದಾರ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ತಲುಪಿದ ಪ್ರತಿಭಟನಾ ಮೆರವಣಿಗೆ ಕೆಲ ಸಮಯ ಪ್ರತಿಭಟನೆ ನಡೆಸಿ, ಮಹದಾಯಿ ಯೋಜನೆ ಜಾರಿ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಮಾಡುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿವೆ. ಹಲವಾರು ವರ್ಷಗಳಿಂದ ಈ ಯೋಜನೆ ಜಾರಿಗೆ ಹೋರಾಟಗಳು ನಿರಂತರವಾಗಿ ನಡೆದುಕೊಂಡು ಬಂದರು ಸರ್ಕಾರಗಳು ಮಾತ್ರ ಪೊಳ್ಳು ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿವೆ ಎಂದು ದೂರಿದರು.
ಇನ್ನೂ ರೈತರ ಟ್ರ್ಯಾಕ್ಟರ್ ಸಾಲ ಹಾಗೂ ರೈತರ ಇತರೆ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ರೈತರ 2023-24 ಹಾಗೂ 2024-25 ನೇ ಸಾಲಿನ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಶೀಘ್ರವಾಗಿ ಬಿಡುಗಡೆ ಮಾಡಬೇಕು, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಳ್ಳದ ನೀರಿನಿಂದ ಅಕ್ಕಪಕ್ಕ ರೈತರ ಬೆಳೆಹಾನಿಯಾಗಿದ್ದು, ಇದಕ್ಕೆ ಶೀಘ್ರ ಪರಿಹಾರ ಸೇರಿದಂತೆ ಮುಂತಾದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಹಶಿಲ್ದಾರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಗ್ರಾಮಗಳ ರಸ್ತೆ ನಿರ್ಮಾಣವಾಗಿ ಎರಡು ತಿಂಗಳು ಕಳೆದಿವೆ, ಅದಾಗಲೇ ರಸ್ತೆಗಳು ಹದಗೆಟ್ಟು ,ರಸ್ತೆಗಳು ಸಂಪೂರ್ಣ ಕಳಪೆಯಾಗಿವೆ ಇವುಗಳನ್ನು ಪುನಃ ನಿರ್ಮಾಣ ಮಾಡಬೇಕು, ಅಲ್ಲದೇ ರೈತರ ಬೆಳೆಗಳು ಮಳೆಯಿಂದಾಗಿ ಹಾನಿಯಾಗಿದ್ದು ಬೆಳೆ ಪರಿಹಾರ ಬಿಡುಗಡೆ ಮಾಡಬೇಕು, ಹೆಚ್ಚಾಗಿ ರೈತರ ಸಾಲಮನ್ನ ಮಾಡಿ ರಾಜ್ಯ ಸರ್ಕಾರ ರೈತಪರವಾದ ಸರ್ಕಾರವೆಂದು ತಿಳಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
