ಎಚ್.ಡಿ.ಕೋಟೆ: ಖಾಸಗಿ ವ್ಯಕ್ತಿಗಳ ಅನುಕೂಲಕ್ಕಾಗಿ ಕಾವೇರಿ ನೀರಾವರಿ ನಿಗಮ ನಿಯಮಿತ ರಸ್ತೆ ಮಾಡಿಕೊಟ್ಟಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಸಿಂಗಾಪಟ್ಟಣ, ಕಿತ್ತೂರು (ತೆರಣಿಮುಂಟಿ) ಗ್ರಾಮದಲ್ಲಿ ಸುಮಾರು ಒಂದು ಕಿ.ಮೀ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿದ್ದು, ಇದನ್ನು ಖಾಸಗಿ ವ್ಯಕ್ತಿ ಅನುಕೂಲಕ್ಕಾಗಿ ನೀರಾವರಿ ಇಲಾಖೆ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಪ್ರಸ್ತಾಪವಾಗಿತ್ತು.
ಒಬ್ಬ ಖಾಸಗಿ ವ್ಯಕ್ತಿ ತನ್ನ ಅನುಕೂಲಕ್ಕಾಗಿ ಕಾವೇರಿ ನೀರಾವರಿ ನಿಗಮದ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡು ರಸ್ತೆ ನಿರ್ಮಿಸಿಕೊಂಡಿದ್ದಾನೆ ಎಂಬ ಆರೋಪವನ್ನು ಸ್ಥಳೀಯರು ನಿರಾಕರಿಸಿದ್ದಾರೆ.
ತೆರಣಿಮುಂಟಿ ಗ್ರಾಮದ ರೈತರಾದ ಪ್ರವೀಣ್, ಮಲ್ಲೇಶ್, ಸಿದ್ದನಾಯಕ, ಗೋಪಾಲ್ ಮಾತನಾಡಿ, ಈ ಪ್ರದೇಶದಲ್ಲಿ ಸುಮಾರು 150 ಎಕರೆಗೂ ಹೆಚ್ಚು ಸಾಗುವಳಿ ಭೂಮಿಯಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಲು ರಸ್ತೆಯಿಲ್ಲದೆ ಸಾಕಷ್ಟು ತೊಂದರೆಯಾಗುತ್ತಿತ್ತು. ಈ ಬಗ್ಗೆ ನಾವು ರಸ್ತೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಲಿಲ್ಲ. ಈ ಬಗ್ಗೆ ನಾವು ಪರ್ಯಾಯ ಮಾರ್ಗವಾಗಿ ರೈತರೆಲ್ಲರೂ ಒಗ್ಗೂಡಿ ನಮ್ಮ ಸ್ವಂತ ದುಡ್ಡಿನಿಂದ ಮಣ್ಣು ಸುರಿಸಿ ರಸ್ತೆ ನಿರ್ಮಿಸಿಕೊಂಡಿದ್ದೇವೆ ಎಂದು ರೈತರು ತಿಳಿಸಿದರು.
