ಸೆಪ್ಟೆಂಬರ್ ಕ್ರಾಂತಿ ಎಂದ ರಾಜಣ್ಣ; ಆಗಸ್ಟ್ನಲ್ಲೇ ರಾಜೀನಾಮೆ ಮೂಲಕ ಶಾಕ್
ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಭಾವಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ದಿಢೀರ್ ರಾಜೀನಾಮೆ ನೀಡಿರುವ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ನಲ್ಲಿ ಸೆಪ್ಟೆಂಬರ್ ಕ್ರಾಂತಿ ಎಂದು ಬಾಂಬ್ ಸಿಡಿಸಿದ್ದ ರಾಜಣ್ಣ ಆಗಸ್ಟ್ನಲ್ಲೇ ರಾಜೀನಾಮೆ ಮೂಲಕ ಶಾಕ್ ಕೊಟ್ಟಿದ್ದಾರೆ. ಈ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ರಾಜೀನಾಮೆ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ. ‘ನನ್ನನ್ನ ಸಂಪುಟದಿಂದ ವಜಾ ಮಾಡಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ. ಯಾರೆಲ್ಲ ಏನೆಲ್ಲ ಮಾಡಿದ್ದಾರೆ ಅಂತಾ ಕಾಲ ಬಂದಾಗ ಎಲ್ಲವನ್ನೂ ನಾನೇ ಹೇಳುತ್ತೇನೆ’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ‘ಈಗ ಮಾಜಿ ಸಚಿವ ಅಂತಾ ಕರೆಸಿಕೊಳ್ಳಲು ಖುಷಿಯಾಗುತ್ತಿದೆ. ನನಗೆ ಅವಕಾಶ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ, ಎಲ್ಲ ಸಚಿವರಿಗೆ ಧನ್ಯವಾದ ಹೇಳಿದ್ದೀನಿ. ನನಗೆ ಎಲ್ಲ ಸಚಿವರು ಹಾಗೂ ಶಾಸಕರು ಸಹಾಯ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿಗಳು ಯಾವುದೇ ಹೇಳಿಕೆ ನೀಡಿಲ್ಲ. ಹಾಗೆಂದು ನಾನು ಏನನ್ನೂ ಹೇಳದೇ ಇರೋದಿಲ್ಲ. ರಾಜ್ಯಪಾಲರ ಕಚೇರಿಯಿಂದ ಬಂದಿರುವ ಪತ್ರದ ಬಗ್ಗೆಯೂ ಗೊತ್ತಿದೆ’ ಎಂದು ರಾಜಣ್ಣ ಹೇಳಿದ್ದಾರೆ.
