ಇಂದು ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ ಕೊಡಗಿನಲ್ಲಿ ಆಚರಣೆಯನ್ನು ಮಾಡಲಾಯಿತು
ಕೊಡಗು : ಕೊಡಗು ಜಿಲ್ಲೆಯ ಸಾಕಾನೆ ಶಿಬಿರ ದುಬಾರೆ ಹಾಗೂ ಹಾರಂಗಿ ಆನೆ ಶಿಬಿರದಲ್ಲೂ ಆನೆ ದಿನಾಚರಣೆಯನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಾಕಾನೆ ಶಿಬಿರಗಳಲ್ಲಿ ಮುಂಜಾನೆಯಿಂದಲೇ ಆನೆಗಳನ್ನು ಕಾವೇರಿ ನೀರಿನಲ್ಲಿ ಜಳಕ ಮಾಡಿಸಿ ಬಣ್ಣ – ಬಣ್ಣಗಳಿಂದ ಅಲಂಕಾರ ಮಾಡಿ, ಆನೆ ಮೇಲೆ ಚಿತ್ರಬಿಡಿಸಿ ಬಳಿಕ ಹೂ, ಹಾರ ಹಾಕಿ ದೊಡ್ಡ ಮತ್ತು ಮರಿ ಆನೆಗಳಿಗೆ ಪೂಜೆ ಸಲ್ಲಿಸಿ ವಿಶೇಷ ಆಹಾರ ನೀಡಿದರು. ಕಾಡಿನ ಮಕ್ಕಳಾದ ಅರಣ್ಯ ಸಿಬ್ಬಂದಿಗಳು ಆನೆಗಳಿಗೆ ಸಿಹಿ ಕೊಟ್ಟು ತಾವು ಸಿಹಿ ತಿಂದು ವಿಜೃಂಭಣೆಯಿಂದ ಆನೆದಿನ ಆಚರಣೆ ಮಾಡಿದರು. ಅರಣ್ಯ ಸಿಬ್ಬಂದಿ, ಮಾವುತರು ಮತ್ತು ಕಾವಾಡಿಗರು ಆನೆಗಳಿಗೆ ಪೂಜೆ ಮಾಡಿ ಗೌರವ ಸಲ್ಲಿಸಿದರು.ಈ ವೇಳೆ ಗಜಪಡೆ ಮಾವುತರು ಮತ್ತು ಅರಣ್ಯಾಧಿಕಾರಿಗಳಿಗೆ ಸೊಂಡಿಲನ್ನು ಎತ್ತಿ ಗೌರವ ಸಲ್ಲಿಸಿದವು. ಇನ್ನು ದುಬಾರೆ ಶಿಬಿರಕ್ಕೆ ಬಂದಿದ್ದ ಪ್ರವಾಸಿಗರು ಅಲಂಕಾರಗೊಂಡಿದ್ದ ಆನೆಗಳನ್ನು ಒಟ್ಟಿಗೆ ನೋಡಿ ಸಂತೋಷಪಟ್ಟರು.
