ಡಾ.ವಿಷ್ಣುವರ್ಧನ್ ಸ್ಮಾರಕ ಮರುನಿರ್ಮಾಣ ಮಾಡದಿದ್ದರೆ ವಿಧಾನಸೌಧ ಮುತ್ತಿಗೆಗೆ ಬಸವರಾಜ ಬಿ ಬಾಗೇವಾಡಿ ಆಗ್ರಹ


ಕಲಬುರಗಿ: ಡಾ.ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ಅಧ್ಯಕ್ಷ ಬಸವರಾಜ ಬಿ. ಬಾಗೇವಾಡಿ ಅವರ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ಸಿಎಂಗೆ ಮನವಿ ಮಾಡಲಾಯಿತು.
ಕರ್ನಾಟಕದ ಚಲನಚಿತ್ರ ಲೋಕದಲ್ಲಿ ‘ಸಾಹಸಸಿಂಹ” ಎಂದು ಹೆಸರಾಂತ, ಜನಮನಗಳನ್ನು ಗೆದ್ದ, ಶ್ರೇಷ್ಠ ನಟ, ಪದ್ಮಭೂಷಣ ಪುರಸ್ಕೃತ, ಡಾ. ವಿಷ್ಣುವರ್ಧನ್ ಅವರ ಸೇವೆ ಮತ್ತು ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಮತ್ತು ಕರ್ನಾಟಕದ ಹೆಸರನ್ನು ದೇಶದಾದ್ಯಂತ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದರು.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ|| ವಿಷ್ಣುವರ್ಧನ್ ರವರ ಸ್ಮಾರಕವು ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ. ಆದರೆ ಇತ್ತೀಚೆಗೆ, ಸ್ಮಾರಕ ಇರುವ ಜಾಗವನ್ನು ಕೆಲವರು ತಮ್ಮ ಹಕ್ಕು ಭೂಮಿಯೆಂದು ಹೇಳಿಕೊಂಡು ರಾತ್ರೋರಾತ್ರಿ ಧ್ವಂಸ ಮಾಡಿರುವುದು ನಮ್ಮೆಲ್ಲರಿಗೂ ನೋವು ತಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸದರಿ ಭೂಮಿಯನ್ನು ತಕ್ಷಣವೇ ಭೂಸ್ವಾಧೀನಪಡಿಸಿಕೊಳ್ಳಬೇಕು. ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ಕಾಪಾಡಿ, ಅದನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿಸಬೇಕು. ಕಲೆಯ ಪ್ರದರ್ಶನ ಮತ್ತು ತರಬೇತಿಯ ಕಲಾ ಗ್ರಾಮವಾಗಿ ಹಾಗೂ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸಬೇಕೆಂದು ತಾಲ್ಲೂಕು ಅಧ್ಯಕ್ಷರಾದ ಬಸವರಾಜ ಬಿ ಬಾಗೇವಾಡಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘಟನೆಗಳು, ಚಾಲಕರು, ಕಾಲೇಜಿನ ವಿದ್ಯಾರ್ಥಿಗಳು, ಡಾ.ವಿಷ್ಣುವರ್ಧನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
