ರಾಜ್ಯದಲ್ಲಿ ರಸಗೊಬ್ಬರ ಕೊರತೆ ಸರ್ಕಾರ- ವಿಪಕ್ಷಗಳ ನಡುವೆ ಮಾತಿನ ಚಕಮಕಿ
ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ರಾಜ್ಯದ ರಸಗೊಬ್ಬರ ಕೊರತೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ನುಡುವೆ ತೀವ್ರ ವಾಗ್ವಾದಕ್ಕೆ ಗ್ರಾಸವಾಯಿತು. ನಾಯಕರು ಪರಸ್ಪರ ವೈಯಕ್ತಿಕ ದಾಳಿ ನಡೆಸಿದರು. ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳು ಭಾಷೆ ಬಳಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ನಾಯಕರಿಗೆ ಮನವಿ ಮಾಡಿದರು.
ರಸಗೊಬ್ಬರ ಸಮಸ್ಯೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಹಾದಿ ತಪ್ಪಿ ಸ್ಮಾರ್ಟ್ ಮೀಟರ್, ರಾಮನಗರ ರಾಜಕೀಯ, ಜೈಲು, ಮತಗಳವು ಬಗ್ಗೆ ಕಾಂಗ್ರೆಸ್-ಬಿಜೆಪಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ ಪರಿಣಾಮ ಸದನದಲ್ಲಿ ಗದ್ದಲ ಏರ್ಪಟ್ಟಿತು. ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಲಾಯಿತು.ಕಲಾಪ ಪುನರಾರಂಭವಾದಾಗ ಸ್ಪೀಕರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಎರಡೂ ಪಕ್ಷಗಳ ಶಾಸಕರು ಆತ್ಮಾವಲೋಕನ ಮಾಡಿಕೊಂಡು ಸದನದ ಘನತೆಯನ್ನು ಎತ್ತಿಹಿಡಿಯಲು ಶಿಸ್ತನ್ನು ಅನುಸರಿಸುವಂತೆ ಸೂಚಿಸಿದರು.
ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಅವರು, ರಾಜ್ಯ ಸರ್ಕಾರವು ಕೇಂದ್ರಕ್ಕೆ ನೀಡಿದ ಒಪ್ಪಂದ 11.17 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ (ಯೂರಿಯಾ), ಆಗಸ್ಟ್ 2025 ರ ವೇಳೆಗೆ ರಾಜ್ಯಕ್ಕೆ 7.6 ಲಕ್ಷ ಮೆಟ್ರಿಕ್ ಟನ್ ಅಗತ್ಯವಿತ್ತು. ಆದರೆ ಕೇಂದ್ರವು 9.7 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ ಎಂದು ಹೇಳಿದರು.ಈ ಅಂಕಿಅಂಶಗಳನ್ನು ಸಚಿವ ಚೆಲುವರಾಯ ಸ್ವಾಮಿ ಅವರು ತಿರಸ್ಕರಿಸಿದರು, ಕೇಂದ್ರವು ರಾಜ್ಯಕ್ಕೆ ಇನ್ನೂ 2.23 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಬೇಕಿದೆ ಎಂದು ಹೇಳಿದರು. ಕೇಂದ್ರಕ್ಕೆ ಮಾಡಿದ ಅನೇಕ ವಿನಂತಿಗಳು ಫಲ ನೀಡಿಲ್ಲ. ಕೇಂದ್ರ ರಸಗೊಬ್ಬರ ಸಚಿವ ಜೆ ಪಿ ನಡ್ಡಾ ಇನ್ನೂ ಅಪಾಯಿಂಟ್ಮೆಂಟ್ ನೀಡಿಲ್ಲ. ಆದರೆ, ನಾನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಹತ್ತು ಬಾರಿ ಮಾತನಾಡಿದ್ದೇನೆ. ಅವರು ಪ್ರತಿ ಬಾರಿಯೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದರು. ಕೇಂದ್ರದಿಂದ ಪೂರೈಕೆಯ ಕೊರತೆಯಿದ್ದರೂ ರಾಜ್ಯವು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ ಎಂದು ತಿಳಿಸಿದರು.
