ಶ್ರಾವಣ ಮಾಸ ಬಂದರೆ ಮಕ್ಕಳಿಗೆ ಹಬ್ಬ| ದಿನವೂ ವಿಧವಿಧದ ಸಿಹಿಖಾದ್ಯಗಳ ಭಕ್ಷ್ಯ

ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪು. ಬಡ್ನಿ ಗ್ರಾಮದ ಎಸ್.ಸಿ.ಎಚ್ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ನಾಡಿಗೆ ದೊಡ್ಡ ಹಬ್ಬವಾದ ನಾಗರ ಪಂಚಮಿಯೊಂದಿಗೆ ಬರುವ ಶ್ರಾವಣ ಮಾಸವನ್ನು ಈ ಶಾಲೆಯ ಮಕ್ಕಳು ಶ್ರಾವಣ ಬಂತು ಶ್ರಾವಣ ಎಂದು ಆನಂದದಿಂದ ಸ್ವಾಗತಿಸುತ್ತಾರೆ. ಶ್ರಾವಣದ ಆಗಮನಕ್ಕೆ ಈ ಶಾಲೆಯ ಮಕ್ಕಳು ಸಂತೋಷಪಡಲು ಮುಖ್ಯ ಕಾರಣ ಮಧ್ಯಾಹ್ನದ ಅಮೃತ ಭೋಜನ.ಶಾಲೆಯ ಶಿಕ್ಷಕರು ಹಾಗೂ ಎಸ್ಡಿಎಂಸಿಯವರ ದೂರದೃಷ್ಟಿಯ ಫಲವಾಗಿ ಈ ಶಾಲೆಯ ಮಕ್ಕಳಿಗೆ ಶ್ರಾವಣ ಮಾಸದಾದ್ಯಂತ ಮಧ್ಯಾಹ್ನದ ಬಿಸಿ ಊಟದಲ್ಲಿ ಸಿಹಿ ಊಟ ಸಿಗುತ್ತದೆ. ನಾಗರ ಅಮವಾಸ್ಯೆಯಿಂದ ಬೆನಕನ ಅಮವಾಸ್ಯೆಯವರೆಗೆ ಈ ಶಾಲೆಯ ಮಕ್ಕಳಿಗೆ ಪ್ರತಿ ದಿನ ಮಧ್ಯಾಹ್ನ ಬಿಸಿ ಊಟದಲ್ಲಿ ನೀಡುವ ಸಿಹಿ ಊಟಕ್ಕೆ ಶಿಕ್ಷಕರು ಅಮೃತ ಭೋಜನ ಎಂದು ನಾಮಕರಣ ಮಾಡಿದ್ದಾರೆ. ಈ ಊರಿನ ನಾಗರಿಕರ ಶಿಕ್ಷಣ ಪ್ರೇಮ, ಶಿಕ್ಷಕರ ಕಾಳಜಿ, ದಾನಿಗಳ ಉದಾರ ನೆರವಿನಿಂದ ಈ ಶಾಲೆಯ ಮಕ್ಕಳು ಒಂದು ತಿಂಗಳು ಮಧ್ಯಾಹ್ನದ ಬಿಸಿ ಊಟದಲ್ಲಿ ನಾನಾ ಬಗೆಯ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಈ ಶಾಲೆಯಲ್ಲಿ 164 ಮಕ್ಕಳಿದ್ದು ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ , ಶ್ರಾವಣ ಮಾಸದ ಹಬ್ಬದ ಸಿಹಿಯನ್ನು ಸವಿಯುತ್ತಾರೆ
