ಭಾರತದ ರಫ್ತಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಿರುವ ಅಮೆರಿಕಾ ಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಆಕ್ರೋಶ
ನವದಹಲಿ: ಭಾರತದ ರಫ್ತಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಿರುವ ಅಮೆರಿಕಾ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ದೇಶವನ್ನು ರಕ್ಷಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿ ನಗು, ಅಪ್ಪುಗೆ ಮತ್ತು ಸೆಲ್ಫಿಗಳ ಬದಲು ಪರಿಣಾಮಕಾರಿ ವಿದೇಶಾಂಗ ನೀತಿಗಳತ್ತ ಗಮನಹರಿಸಿ ಎಂದು ಖರ್ಗೆ ಸಲಹೆ ನೀಡಿದ್ದಾರೆ.ಇಂದಿನಿಂದ ‘ಅಬ್ಕಿ ಬಾರ್, ಟ್ರಂಪ್ ಸರ್ಕಾರ್ ಭಾರತದ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸಿದೆ. ಈ ಸುಂಕದ ಮೊದಲ ಆಘಾತವಾಗಿ ನಾವು 10 ವಲಯಗಳಲ್ಲಿ ಅಂದಾಜು 2.17 ಲಕ್ಷ ಕೋಟಿ ನಷ್ಟ ಅನುಭವಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಲೆ ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳ ನಡುವೆ ರೈತರ ಹಿತಾಸಕ್ತಿಗಳನ್ನು ಕಾಪಾಡುವ ಬಗ್ಗೆ ಮೋದಿ ನೀಡಿದ್ದ ಭರವಸೆಗಳನ್ನು ಉಲ್ಲೇಖಿಸಿರುವ ಖರ್ಗೆಯವರು, ಸುಂಕಗಳಿಂದ ಹೆಚ್ಚು ದುಷ್ಪರಿಣಾಮ ಬೀರುತ್ತಿರುವುದು ರೈತರ ಮೇಲೆ. ಅವರ ಹಿತಾಸಕ್ತಿ ಕಾಪಾಡುವ ಮಾತನಾಡಿದ್ದ ಮೋದಿ ಭರವಸೆ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
