ಬೆಂಗಳೂರು : ಹೆಬ್ಬಾಳ- ಸರ್ಜಾಪುರದ 37 ಕಿ.ಮೀ. ಉದ್ದದ ನಮ್ಮ ಮೆಟ್ರೋ ಕೆಂಪು ಮಾರ್ಗದ ಯೋಜನೆ ನಿರ್ಮಾಣ ವೆಚ್ಚವನ್ನು ಮರು ಮೌಲ್ಯಮಾಪನ ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸೂಚನೆ ನೀಡಿ 4 ತಿಂಗಳಾದರೂ ರಾಜ್ಯದ ಬಿಎಂಆರ್ಸಿಎಲ್ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.ಹೆಬ್ಬಾಳದಿಂ ಸರ್ಜಾಪುರಕ್ಕೆ ಸಂಪರ್ಕಿಸುವ ಯೋಜನೆ ಇದಾಗಿದ್ದು, ಅತೀ ದುಬಾರಿ ವೆಚ್ಚದ ಯೋಜನೆ ಇದಾಗಿದೆ. ಈ ಯೋಜನೆಯನ್ನು 2024ರಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿತ್ತು. ಇದೀಗ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆಗೆ ಕಾಯುತ್ತಿದೆ.ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವು ಮೆಟ್ರೋ ಹಂತ-3ನ್ನು 100 ದಿನಗಳಲ್ಲಿ ಅನುಮೋದನೆ ನೀಡಿತ್ತು. ಆದರೆ, ನಾಗರೀಕ ಕಾಮಗಾರಿಗೆ ಗುತ್ತಿಗೆ ಕರೆಯುವಲ್ಲಿ ಬಿಎಂಆರ್ಸಿಎಲ್ ವಿಫಲವಾಗಿದೆ. ಈ ವಿಳಂಬ ನೀತಿಯು ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದು ಪ್ರಯಾಣಿಕರಿಗೆ ಹೊರೆಯಾಗಲಿದೆ. ಹೀಗಾಗಿ, ಬಿಎಂಆರ್ಸಿಎಲ್ ಕೂಡಲೇ ಕಾರ್ಯ ಪ್ರವೃತ್ತವಾಗಬೇಕೆಂದು ಆಗ್ರಹಿಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ. ಆಶಿಶ್ ವರ್ಮಾ ಅವರು ಮಾತನಾಡಿ, ಬಿಎಂಆರ್ಸಿಎಲ್’ನ ಕಳಪೆ ಆದ್ಯತೆಯನ್ನು ತೋರಿಸುತ್ತದೆ. ರಸ್ತೆ ನಿರ್ಮಾಣ ಕಾರ್ಯಗಳು ತ್ವರಿತವಾಗಿ ಆಗುತ್ತಿದೆ ಎಂದರೆ, ಮೆಟ್ರೋ ಕಾರ್ಯವೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಮೇ 23 ರಂದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು, ಬೆಂಗಳೂರಿನ ಪ್ರಸ್ತಾವಿತ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್ನ ವೆಚ್ಚದ ಅಂದಾಜನ್ನು ತಜ್ಞ ಸಂಸ್ಥೆಯಿಂದ ಪರಿಶೀಲಿಸಬೇಕು ಎಂದು ಹೇಳಿದ್ದರು.
