ಯಾದಗಿರಿ: ಯಾದಗಿರಿಯ ಸುರಪುರ ತಾಲ್ಲೂಕಿನ ದಂಡಾಧಿಕಾರಿಗಳ ಕಚೇರಿಯಲ್ಲಿ ರೈತನೋರ್ವ ತನ್ನ ಪಹಣಿಯ ಸರ್ವೇ. ನಂ. ೧೧೭ಪೋ ೨ ರಲ್ಲಿರುವ ಪಹಣಿಯಲ್ಲಿ ತನ್ನ ಹೆಸರು ತಿದ್ದುಪಡಿಗೆ ಕಳೆದ ನಾಲ್ಕು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ತಹಶೀಲ್ದಾರ್ ಅಧಿಕಾರಿ ಬೇಜವಾಬ್ದಾರಿತನ ತೋರಿಸುವ ಕಾರಣ ರೈತನು ರಂಪಾಟ ಮಾಡಿದ್ದಾರೆ.ತಹಸಿಲ್ ಕಚೇರಿಯಲ್ಲಿ ಇಂಥ ಸಮಸ್ಯೆ ಸರ್ವೇಸಾಮಾನ್ಯವಾಗಿದ್ದು ಪಹಣಿ ತಿದ್ದುಪಡಿ ಸೇರಿದಂತೆ ಇತರ ದಾಖಲೆಗಳನ್ನು ಪಡೆಯಲು ರೈತರು ಹೈರಾಣಾಗಿದ್ದರೆ, ದಾಖಲೆಗಳ ಬಗ್ಗೆ ಮಾಹಿತಿ ಇಲ್ಲದ ರೈತರಿಗೆ ಅನಗತ್ಯ ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ದಿನ ನಿತ್ಯ ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗಿಂತ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು. ಒಬ್ಬ ನೌಕರರ ಜೊತೆಗೆ ನಾಲ್ಕು ಜನ ದಲ್ಲಾಳಿಗಳಿದ್ದು ಎಲ್ಲಾ ದಾಖಲೆಗಳನ್ನು ಅವರ ಮೂಲಕವೇ ಅಧಿಕಾರಿಗಳು ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕವಾಗಿ ಚರ್ಚೆಯಲ್ಲಿವೆ.ಹದನೂರ ಗ್ರಾಮದ ರೈತ ಕಳೆದ ನಾಲ್ಕುವರ್ಷದಿಂದ ಪಹಣಿಯಲ್ಲಿ ಹೆಸರು ತಿದ್ದುಪಡಿಗಾಗಿ ಎಲ್ಲಾ ದಾಖಲಾತಿಗಳನ್ನು ನೀಡಿ ದಿನಂಪ್ರತಿ ತಹಶೀಲ್ದಾರ ಕಚೇರಿಗೆ ಅಲೆದಾಡಿ ಕೊನೆಗೆ ಬೇಸತ್ತು ಕಚೇರಿಯ ಸಿಬ್ಬಂದಿಯೊಂದಿಗೆ ರಂಪಾಟ ನಡೆಸಿದ್ದಾರೆ. ರೈತನ ಪ್ರಶ್ನೆಗೆ ಉತ್ತರಿಸಲಾಗದೆ ರೈತನನ್ನು ಸಮಾಧಾನ ಪಡಿಸಲು ವಿಫಲರಾಗಿದ್ದಾರೆ. ಇಷ್ಟೆಲ್ಲಾ ಘಟನೆಯು ನಡೆಯುತ್ತಿದ್ದರು ಯಾರೊಬ್ಬ ಸಿಬ್ಬಂದಿಯೂ ರೈತನನ್ನು ಸಮಾಧಾನ ಪಡಿಸಿ ಸನ್ನಿವೇಶವನ್ನು ತಿಳಿಗೊಳಿಸದೆ ಘಟನೆಯನ್ನು ಮೂಕ ವಿಸ್ಮಿತರಾಗಿ ನೋಡುತ್ತಾ ರೈತನನ್ನು ವ್ಯಂಗದಿಂದ ನೋಡುತ್ತಾ ಕುಳಿತಿರುವುದನ್ನು ಗಮನಿಸಿದ ಸಾರ್ವಜನಿಕರು, ಇದು ನಮ್ಮ ಅನ್ನದಾತರಿಗೆ ಅಧಿಕಾರಿ ವರ್ಗ ನೀಡುವ ಗೌರವ, ಎಂದು ಗೊಣಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
