

ಬೆಳಗಾವಿ: ಬೆಳಗಾವಿಯ ರಾಣಿ ಕಿತ್ತೂರು ಚೆನ್ನಮ್ಮ ಮೃಗಾಲಯದಲ್ಲಿ ಕೆಲ ದಿನಗಳಿಂದ ಹಲವಾರು ಜಿಂಕೆಗಳು ಸಾವನ್ನಪ್ಪುತ್ತಿವೆ. ಇದರಿಂದ ಕಳೆದ ವಾರದಿಂದ ಇಂದಿನ ದಿನದವರೆಗೆ ಸುಮಾರು 28 ಜಿಂಕೆಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಜಿಂಕೆಗಳ ಸಾವಿನ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಜಿಂಕೆಗಳ ಮರಣೋತ್ರ ಪರೀಕ್ಷೆಯಲ್ಲಿ ಪ್ರಾಣಿಯ ಹೃದಯ, ಕಿಡ್ನಿ ಸೇರಿ ಅಂಗಾಂಗಗಳ ಮಾದರಿಯನ್ನು ಪರಿಶೀಲಿಸಿದಾಗ ಬ್ಯಾಕ್ಟೀರಿಯಾ ಇನ್ಪೇಕ್ಷನ್(ಪಾಸ್ಪುರೆಲ್ಲಾಮಲ್ಟೋಸಿಡಾ) ಎಂಬ ರೋಗದಿಂದ ಸಾವನ್ನಪ್ಪಿವೆ ಎಂದು ದೃಢಪಡಿಸಿದ್ದಾರೆ. ಈ ಸಾವಿನಿಂದ ಮೃಗಾಲಯದ ನಿರೀಕ್ಷಣಾ ಲೋಪಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಎಂಬ ಪ್ರಶ್ನೆ ಕಾಡುತ್ತಿವೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶ ನೀಡಿದ್ದಾರೆ.
ಈ ಜಿಂಕೆಗಳು ಕಲುಷಿತ ನೀರು, ಆಹಾರ ಸೇವಿಸಿ ಕಾಯಿಲೆಗೆ ತುತ್ತಾಗಿ ಮೃತಪಟ್ಟಿವೆಯೇ ಅಥವಾ ಸಾಕು ಪ್ರಾಣಿಗಳಿಂದ ಈ ಸೋಂಕು ಹರಡಿದೆಯೇ ಎಂಬ ಬಗ್ಗೆ ತಜ್ಱರ ತನಿಖೆ ಸಂದರ್ಭದಲ್ಲಿ ಸಂದೇಹಪಟ್ಟಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ಸಚಿವರು ಸೂಚನೆ ನೀಡಿದ್ಧಾರೆ.
