
ಬೆಳಗಾವಿ: ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಕಾಲುಬೇನೆ–ಗಂಟಲುಬೇನೆ ರೋಗ ಮತ್ತೆ ತಲೆದೋರಿದ್ದು ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಅನೇಕ ಹಳ್ಳಿಗಳಲ್ಲಿ ಹಸು–ಎಮ್ಮೆಗಳಿಗೆ ಜ್ವರ, ಕಾಲುಗಳು ಊದಿಕೊಳ್ಳುವುದು, ಗಂಟಲು ಭಾಗದಲ್ಲಿ ನೋವು, ತಿನ್ನಲು ತೊಂದರೆ ಅನುಭವಿಸುತ್ತಿವೆ. ಈ ಲಕ್ಷಣಗಳು ವೇಗವಾಗಿ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ರೋಗದ ಸಾಂಕ್ರಾಮಿಕ ಸ್ವರೂಪ ರೈತರಲ್ಲಿ ಹೆದರಿಕೆಯನ್ನುಂಟುಮಾಡಿದೆ. ಈ ನಡುವೆ ಪಶುಸಂಗೋಪನೆ ಇಲಾಖೆಯ ನಿಧಾನ ಸ್ಪಂದನೆ, ಸಕಾಲದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ದಿನಗಳಲ್ಲಿ 31 ಕೃಷ್ಣ ಮೃಗಗಳ ಸಾವು ನಡೆದಿದ್ದರೂ ಇಲಾಖೆಯ ಕ್ರಮಗಳ ವೇಗ ಹೆಚ್ಚಾಗಿಲ್ಲವೆಂಬುದು ಕೃಷಿಕ ಸಮುದಾಯದ ಅಳಲು. ಈ ಘಟನೆಯ ನಂತರವೇ ಬೆಳಗಾವಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿ ವಿವಿಧ ರೈತಮುಖಂಡರು ಇಲಾಖೆಯ ನಿರ್ಲಕ್ಷ್ಯವೇ ಅನೇಕ ಜಾನುವಾರುಗಳ ಜೀವಕ್ಕೆ ಕಾರಣವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೃಷ್ಣ ಮೃಗಗಳ ಸಾವು ನಡೆದಿದೆ, ಆ ಬಳಿಕವೂ ಯಾವುದೇ ತುರ್ತು ಕ್ರಮ, ಲಸಿಕೆ, ಉನ್ನತ ಮಟ್ಟದ ವೈದ್ಯಕೀಯ ತಂಡಗಳ ಚಟುವಟಿಕೆ ಕಾಣಿಸಲಿಲ್ಲ. ಸರ್ಕಾರವೂ ಮೌನವಾಗಿದ್ದುದು ಅಚ್ಚರಿಯ ವಿಷಯ ಎಂದು ಅನ್ನದಾತರು ಪ್ರಶ್ನಿಸಿದ್ದಾರೆ.
