ಬೆಂಗಳೂರು: ಚಿಕ್ಕಬಾಣಾವರ ರೈಲು ನಿಲ್ದಾಣದ ಸಮೀಪ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಪಘಾತ ಸಂಭವಿಸಿದೆ. ರೈಲ್ವೆ ಹಳಿಯಲ್ಲಿ ಭಾನುವಾರ ಸಂಜೆ ಒಂದು ಭಯಾನಕ ದುರಂತ ನಡೆದಿದೆ. ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅತಿ ವೇಗದಲ್ಲಿ ಬಂದು ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಪ್ರಥಮ ವರ್ಷ ಬಿ. ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಇಬ್ಬರ ದೇಹಗಳು ತೀವ್ರವಾಗಿ ಛಿದ್ರ ಛಿದ್ರಗೊಂಡು ಹಳಿಗಳ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. ಮೃತ ವಿದ್ಯಾರ್ಥಿನಿಗಳನ್ನು ಸ್ಟರ್ಲಿನ್ ಎಲಿಜಾ ಶಾಜಿ (19) ಮತ್ತು ಜಸ್ಟಿನ್ ಜೋಸೆಫ್ (20) ಎಂದು ಗುರುತಿಸಲಾಗಿದೆ.
ಈ ರೈಲು ಅಪಘಾತದಲ್ಲಿ ಬಲಿಯಾದ ಇಬ್ಬರೂ ಕೇರಳದ ಪತ್ತನಂತಿಟ್ಟ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಇಬ್ಬರು ಸಪ್ತಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ನಲ್ಲಿ ಪ್ರಥಮ ವರ್ಷ ಬಿ.ಎಸ್ಸಿ ನರ್ಸಿಂಗ್ ಓದುತ್ತಿದ್ದರು ಮತ್ತು ಚಿಕ್ಕಬಾಣಾವರದ ಹತ್ತಿರದ ಪೇಯಿಂಗ್ ಗೆಸ್ಟ್ನಲ್ಲಿ ವಾಸವಿದ್ದರು. ಇಬ್ಬರು ಪಿಜಿಗೆ ಹೋಗಲು ಹಳಿ ಮೇಲೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ ಸಂಜೆ ಸುಮಾರು 6:15ರ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಪೇಯಿಂಗ್ ಗೆಸ್ಟ್ಗೆ ಹಿಂತಿರುಗುತ್ತಿದ್ದರು. ರೈಲ್ವೆ ಹಳಿ ದಾಟುವಾಗಲೇ ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆ ಸ್ ಅತಿ ವೇಗದಲ್ಲಿ ಬಂದು ಇಬ್ಬರಿಗೂ ಡಿಕ್ಕಿಯಾಗಿದೆ. ರೈಲ್ವೆ ಅಧಿಕಾರಿಗಳು ತಿಳಿಸಿದಂತೆ, ಈ ಭಾಗದಲ್ಲಿ ಅನಧಿಕೃತವಾಗಿ ಹಳಿ ದಾಟುವುದು ಸಾಮಾನ್ಯ. ಆದರೆ ಈ ಸ್ಥಳದಲ್ಲಿ ಯಾವುದೇ ಫುಟ್ಓವರ್ ಬ್ರಿಡ್ಜ್ ಅಥವಾ ಅಂಡರ್ಪಾಸ್ ಇಲ್ಲ. ಜನರು ಅಪಾಯ ತಿಳಿಯದೇ ಹಳಿ ದಾಟುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಮತ್ತು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ. ತನಿಖಾಧಿಕಾರಿಗಳು ಎರಡೂ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರ. :ಇಬ್ಬರು ಒಟ್ಟಿಗೇ ಹಳಿ ದಾಟುತ್ತಿದ್ದುದರಿಂದ ಆತ್ಮಹತ್ಯೆಯ ಸಾಧ್ಯತೆಯನ್ನೂ ತಳ್ಳಿಹಾಕಲಾಗುತ್ತಿಲ್ಲ, ಜೊತೆಗೆ ಅಪಘತವಾ ಎಂವ ಬಗ್ಗೆ ಪೊಲೀಸರ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಮೊಬೈಲ್ ಫೋನ್, ಸಂದೇಶಗಳು, ಕಾಲ್ ರೆಕಾರ್ಡ್ ಪರಿಶೀಲನೆ ನಡೆಯುತ್ತಿದೆ. ಸ್ನೇಹಿತರು, ಪೇಯಿಂಗ್ ಗೆಸ್ಟ್ ಸಿಬ್ಬಂದಿ, ಕಾಲೇಜು ಗೆಳೆಯರಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ.
ಕೇರಳದ ಪತ್ತನಂತಿಟ್ಟದಲ್ಲಿ ಮೃತ ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಆಘಾತ ಮತ್ತು ದುಃಖ ಆವರಿಸಿದೆ. ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅವರು ಬೆಂಗಳೂರಿಗೆ ಆಗಮಿಸಿದ್ದರೆ. ಮೃತದೇಹಗಳನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಿ ಪೋಸ್ಟ್ಮಾರ್ಟಂ ಮಾಡಲಾಗುತ್ತಿದೆ. ನಂತರ ಪೋಷಕರು ಮತ್ತು ಕುಟುಂಬಸ್ಥರು ಮೃತದೇಹಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಲಿದ್ದಾರೆ.
ಆದರೂ ಊರಿಂದ ಊರಿಗೆ ಬಂದು ಈ ರೀತಿ ಅಪಘಾತವಾಗಿ ಸಾವನಪ್ಪಿದ್ರೆ ಪೋಷಕರಿಗೆ ದೊಡ್ಡ ಆಘಾತವಾಗುವುದು ಸತ್ಯ. ಇದೀಗ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
