
ಬೆಂಗಳೂರು : ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ನಕಲಿ ನಂದಿನಿ ತುಪ್ಪ ತಯಾರಿಕೆ ಮತ್ತು ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಸಿಸಿಬಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಈ ಹಗರಣದ ಪ್ರಮುಖ ಸೂತ್ರಧಾರರಾದ ಮೈಸೂರು ಮೂಲದ ಗಂಡ ಮತ್ತು ಹೆಂಡತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಕುಮಾರ್ ಮತ್ತು ಅವರ ಪತ್ನಿ ರಮ್ಯಾ, ಸಿಸಿಬಿ ಪೊಲೀಸರ ತನಿಖೆ ವೇಳೆ ನಕಲಿ ನಂದಿನಿ ಉತ್ಪನ್ನಗಳ ತಯಾರಿಕೆ ಘಟಕದ ಕಿಂಗ್ಪಿನ್ಗಳು ಎಂಬುದು ದೃಢಪಟ್ಟಿದೆ.
ಆರೋಪಿ ದಂಪತಿಗಳು ನೆರೆಯ ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಸ್ಥಾಪಿಸಿ, ನಕಲಿ ತುಪ್ಪ ತಯಾರಿಸಲು ಬಳಸುತ್ತಿದ್ದ ದೊಡ್ಡ ದೊಡ್ಡ ಹೈಟೆಕ್ ಮೆಷಿನರಿಗಳು ಮತ್ತು ಅತ್ಯಾಧುನಿಕ ಯಂತ್ರಗಳು ಪತ್ತೆಯಾಗಿವೆ. ಈ ಯಂತ್ರಗಳನ್ನು ಬಳಸಿಕೊಂಡು ನಂದಿನಿ ಲೇಬಲ್ನ ನಕಲಿ ತುಪ್ಪಗಳನ್ನು ತಯಾರಿಸಿ, ರೀ-ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು.
![]()
ಸಿಸಿಬಿ ಪೊಲೀಸರು ನವೆಂಬರ್ 14ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೋಡೌನ್ ಮೇಲೆ ದಾಳಿ ನಡೆಸಿ, ಮೊದಲಿಗೆ 8,136 ಲೀಟರ್ ನಕಲಿ ನಂದಿನಿ ತುಪ್ಪವನ್ನು ವಶಪಡಿಸಿಕೊಂಡಿದ್ದರು. ಈ ನಕಲಿ ಉತ್ಪನ್ನಗಳನ್ನು ಕೆಲ ನಂದಿನಿ ಪಾರ್ಲರ್ಗಳು ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಪ್ರಕರಣ ದಾಖಲಿಸಿ, ವಿತರಣಾ ಜಾಲದಲ್ಲಿದ್ದ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮತ್ತು ಮುನಿರಾಜು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು. ಸದ್ಯ ಬಂಧಿತರಾಗಿರುವ ಶಿವಕುಮಾರ್ ಮತ್ತು ರಮ್ಯಾ ದಂಪತಿಗಳು ತಯಾರಿಸಿದ ನಕಲಿ ಉತ್ಪನ್ನಗಳನ್ನೇ ಈ ಮಹೇಂದ್ರ ಆ್ಯಂಡ್ ಗ್ಯಾಂಗ್ ರಾಜ್ಯಾದ್ಯಂತ ವಿತರಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
