
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರಿರುವ ನಡುವಲ್ಲೇ ಬ್ರೇಕ್’ಫಾಸ್ಟ್ ಮೀಟಿಂಗ್ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿದ್ದು, ಈ ಭೇಟಿ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.
ಡಿಕೆ.ಶಿವಕುಮಾರ್ ಅವರು ಕಾವೇರಿ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು.
ಇದೀಗ ಸ್ಪೆಷಲ್ ರೂಮ್ನಲ್ಲಿ ಕುಳಿತಿರುವ ಇಬ್ಬರೂ ನಾಯಕರು ಬ್ರೇಕ್ಫಾಸ್ಟ್ ಶುರು ಮಾಡಿದ್ದಾರೆ. ಅಲ್ಲಿಯೇ ಇಬ್ಬರೂ ಒನ್ ಟು ಒನ್ ಮೀಟಿಂಗ್ ಶುರು ಮಾಡಿದ್ದು, ಇತರರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಮುಖ್ಯಮಂತ್ರಿ ಕಾವೇರಿ ನಿವಾಸದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 3 ಕೆಎಸ್ಆರ್ಪಿ ತುಕಡಿ, 2 ಬಸ್ ನಿಯೋಜನೆ ಮಾಡಲಾಗಿದೆ.
ತೀವ್ರ ಗೊಂದಲ ಹುಟ್ಟುಹಾಕಿರುವ ಕುರ್ಚಿ ಗುದ್ದಾಟವನ್ನು ಹೈಕಮಾಂಡೇ ಬಗೆಹರಿಸಲಿದೆ ಎಂದು ಇಡೀ ಕಾಂಗ್ರೆಸ್ ಸಮೂಹ ಕಾದು ಕುಳಿತಿರುವ ಈ ಹಂತದಲ್ಲಿ ಪರಸ್ಪರ ಭೇಟಿ ಮಾಡಿ ಹೊಂದಾಣಿಕೆಗೆ ಪ್ರಯತ್ನಿಸಿ ಎಂಬ ಸ೦ದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದ್ದು, ಅದರಂತೆ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯುತ್ತಿದೆ.
