
ಮುಂಬೈ: ಮಗಳ ಪ್ರೀತಿ ನಿರಾಕರಿಸಿದ ಕುಟುಂಬವೊಂದು ಆಕೆಯ ಪ್ರಿಯಕರನನ್ನೇ ಕೊಂದು ಹಾಕಿದ್ದು, ಇದಕ್ಕೆ ಆಕ್ರೋಶಗೊಂಡ ಯುವತಿ ಪ್ರತ್ಯುತ್ತರವಾಗಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ, 25 ವರ್ಷದ ಸಕ್ಷಾಮ್ ಟೆಟೆ ಎಂಬಾತನನ್ನು ಯುವತಿ ಕುಟುಂಬಸ್ಥರು ಕೊಲೆಗೈದಿದ್ದು, ಇದರಿಂದ ಆಕ್ರೋಶಗೊಂಡ ಯುವತಿ 20 ವರ್ಷದ ಅಂಚಲ್ ಆತನ ಮೃತದೇಹವನ್ನೇ ಮದುವೆಯಾಗಿದ್ದಾರೆ. ಅಂಚಲ್ ಮತ್ತು ಸಕ್ಷಮ್ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರರ ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು. ಆದರೆ ಇವರ ಪ್ರೀತಿ ವಿಚಾರ ಯುವತಿ ಅಂಚಲ್ರ ಕುಟುಂಬಸ್ಥರಿಗೆ ತಿಳಿದು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಯುವತಿ ಕುಟುಂಬಸ್ಥರು ಮದುವೆಗೆ ವ್ಯಾಪಕವಾಗಿ ವಿರೋಧಿಸುತ್ತಿದ್ದರು.
ಅಂಚಲ್ ಆಗಾಗ್ಗೆ ಯುವಕ ಸಕ್ಷಮ್ ಮನೆಗೆ ಹೋಗುತ್ತಿದ್ದ ವಿಚಾರ ತಿಳಿದ ಕುಟುಂಬಸ್ಥರು ಆಕೆಯನ್ನು ಆತನ ಮನೆಗೆ ಹೋಗದಂತೆ, ಆತನನ್ನು ಭೇಟಿಯಾಗದಂತೆ ಎಚ್ಚರಿಸಿದ್ದಾರೆ. ಹಲವಾರು ಬೆದರಿಕೆಗಳ ಹೊರತಾಗಿಯೂ ಆಂಚಲ್ ಮತ್ತು ಸಕ್ಷಮ್ ಟೇಟ್ ಸಂಬಂಧವನ್ನು ಮುಂದುವರೆಸಿದರು. ಈ ನಡುವೆ ಅಂಚಲ್ ಮತ್ತು ಸಕ್ಷಮ್ ಓಡಿ ಹೋಗಿ ಮದುವೆಯಾಗಲು ಸಿದ್ಧರಾಗಿದ್ದರು.ಈ ವಿಚಾರ ತಿಳಿದ ಕುಟುಂಬಸ್ಥರು ಇವರಿಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದರು.
ಅದರಂತೆ ಯುವತಿ ಅಂಚಲ್ ಸಹೋದರ ಮತ್ತು ಆಕೆಯ ತಂದೆ ಸಕ್ಷಮ್ ದಾರಿಯಲ್ಲಿ ಹೋಗುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಆತನ ತಲೆಗೆ ಗುಂಡು ಹಾರಿಸಿ ಬಳಿಕ ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
