
ಕೋಲ್ಕತ್ತಾ: ಇಂದು ಸಾಲ್ಟ್ ಲೇಕ್ ಕ್ರೀಡಾಂಗಣ ಅಕ್ಷರಶಃ ರಣರಂಗದಂತೆ ಆಗಿತ್ತು. ಅರ್ಜೆಂಟೀನಾದ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯನ್ನು ನೋಡಲು ಭಾರಿ ಮೊತ್ತ ಪಾವತಿಸಿ ಟಿಕೆಟ್ ಖರೀದಿಸಿ ಬಂದಿದ್ದ ಪ್ರೇಕ್ಷಕರು, ಆಟಗಾರನನ್ನು ಮೈದಾನದಲ್ಲಿ ನೋಡಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡು ಮೈದಾನಕ್ಕೆ ಏಕಾಏಕಿ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಪುಡಿಮಾಡಿದ ಘಟನೆ ನಡೆದಿದೆ.
ಲಿಯೋನೆಲ್ ಮೆಸ್ಸಿ ಇಂದು ವಿವೇಕಾನಂದ ಯುವ ಭಾರತಿ ಕ್ರೀಡಾಂಗಣಕ್ಕೆ ಸ್ಟ್ರೈಕರ್ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಆಗಮಿಸಿದರು. ಅವರ ಸುತ್ತ ಉದ್ದಕ್ಕೂ ನಿಂತಿದ್ದ ವಿಐಪಿಗಳು, ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯಿಂದ ಸುತ್ತುವರೆದಿದ್ದರುಮೆಸ್ಸಿಯನ್ನು ನೋಡಬೇಕೆಂದು ಸಾವಿರಾರು ರೂಪಾಯಿ ಕೊಟ್ಟು ಟಿಕೇಟ್ ಖರೀದಿಸಿ ಬೆಳಿಗ್ಗೆಯಿಂದ ಕಾಯುತ್ತಿದ್ದರೂ, ನೇರವಾಗಿ ಅಥವಾ ಕ್ರೀಡಾಂಗಣದ ದೊಡ್ಡ ಪರದೆಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದರು.
“ನಮಗೆ ಮೆಸ್ಸಿ ಬೇಕು” ಎಂಬ ಘೋಷಣೆಗಳು ಗ್ಯಾಲರಿಯಿಂದ ಕೇಳಿಬರುತ್ತಲೇ ಇತ್ತು, ಸ್ವಲ್ಪ ಹೊತ್ತು ಕಾದರು. ಹಲವಾರು ಆಹ್ವಾನಿತ ಗಣ್ಯರು ಬರುವ ಮೊದಲೇ, ಕೆಲವೇ ನಿಮಿಷಗಳಲ್ಲಿ ಅರ್ಜೆಂಟೀನಾದ ತಾರೆ ಮೆಸ್ಸಿಯನ್ನು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದಾಗ ಅಭಿಮಾನಿಗಳ ಆಕ್ರೋಶ, ಕೋಪದ ಕಟ್ಟೆಯೊಡೆಯಿತು. ನಿರಾಶೆಗೊಂಡ ಬೆಂಬಲಿಗರು ಮೈದಾನಕ್ಕೆ ನುಗ್ಗಿ ಬಾಟಲಿಗಳನ್ನು ಎಸೆದು, ಗ್ಯಾಲರಿಗಳಲ್ಲಿದ್ದ ಬ್ಯಾನರ್ಗಳು, ಹೋರ್ಡಿಂಗ್ಗಳು ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ಹಾನಿಗೊಳಿಸಿದರು.
ಕೋಲ್ಕತ್ತಾದಲ್ಲಿ ಲಿಯೋನೆಲ್ ಮೆಸ್ಸಿಗೆ ಅಭೂತಪೂರ್ವ ಸ್ವಾಗತ ದೊರೆಯುತ್ತಿದ್ದಂತೆ, ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅವರ ಹೆಸರಿನ ಘೋಷಣೆಗಳು ಮೊಳಗಿದವು. ಮೆಸ್ಸಿಯ ಅಭಿಮಾನಿಗಳು ಅವರ ಹೆಸರಿನ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.
