ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ “ಹಸ್ತಕ್ಷೇಪ”ದ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಬಾರಿ ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ (KJ George) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಇಂಧನ ಇಲಾಖೆಯ ಆಡಳಿತಾತ್ಮಕ ವಿಚಾರಗಳಲ್ಲಿ ಯತೀಂದ್ರ ಅವರ ಅನಗತ್ಯ ಹಸ್ತಕ್ಷೇಪದಿಂದ ಬೇಸತ್ತ ಜಾರ್ಜ್, ನೇರವಾಗಿ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಏನಿದು ವಿವಾದ?
ಇಂಧನ ಇಲಾಖೆಯಲ್ಲಿನ ಕೆಲವು ಹಿರಿಯ ಅಧಿಕಾರಿಗಳ ವರ್ಗಾವಣೆ ಮತ್ತು ಅಮಾನತು (Suspension) ವಿಚಾರದಲ್ಲಿ ಈ ಸಂಘರ್ಷ ಹುಟ್ಟಿಕೊಂಡಿದೆ ಎನ್ನಲಾಗಿದೆ. ಸಚಿವ ಜಾರ್ಜ್ ಅವರ ಗಮನಕ್ಕೆ ತಾರದೆ ಅಥವಾ ಅವರ ಒಪ್ಪಿಗೆಯಿಲ್ಲದೆ ಇಲಾಖೆಯ ಕೆಲ ಪ್ರಮುಖ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮತ್ತು ವರ್ಗಾವಣೆ ಮಾಡಲು ಮೇಲಿನ ಒತ್ತಡ ಹೇರಲಾಗಿತ್ತು. ಈ ಒತ್ತಡದ ಹಿಂದೆ ಸ್ವತಃ ಸಿಎಂ ಪುತ್ರ ಯತೀಂದ್ರ ಅವರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲಾಖೆಯ ದಕ್ಷ ಅಧಿಕಾರಿಗಳ ವಿರುದ್ಧ ಏಕಾಏಕಿ ಅಮಾನತು ಆದೇಶ ಹೊರಡಿಸಲು ಸಿದ್ಧತೆ ನಡೆಸಿದ್ದು ಸಚಿವ ಜಾರ್ಜ್ ಅವರನ್ನು ಕೆರಳಿಸಿತ್ತು.
ತಮ್ಮದೇ ಇಲಾಖೆಯಲ್ಲಿ ತಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ನೊಂದ ಕೆ.ಜೆ. ಜಾರ್ಜ್, ಮುಖ್ಯಮಂತ್ರಿಗಳ ಎದುರೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾರ್ಜ ಅವರು ‘ನಾನು ನಿಮ್ಮ ಜತೆಗೆ ಇರುತ್ತೇನೆ, ಆದರೆ ಸರ್ಕಾರದಲ್ಲಿ ಇರುವುದಿಲ್ಲ’ ಎಂದು ಹೇಳಿದ್ದರು. ಅಲ್ಲದೆ, ಘಟನೆಯಿಂದ ಮನನೊಂದು ಸಂಪುಟ ಸಭೆಗೆ ಸಹ ಗೈರಾಗಿದ್ದರು ಎಂಬುದು ತಿಳಿದುಬಂದಿದೆ. ಈ ಬೆಳವಣಿಗೆಗಳು ಸರ್ಕಾರದೊಳಗಿನ ಅಸಮಾಧಾನ ಬಹಿರಂಗವಾಗುವಂತೆ ಮಾಡಿದ್ದವು.
