ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ (2026) ಸಮೀಪಿಸುತ್ತಿದ್ದಂತೆ ರಾಜ್ಯದ ರಾಜಕೀಯ ಕಣ ರಂಗೇರುತ್ತಿದೆ. ಚೆನ್ನೈನಲ್ಲಿ ನಡೆದ ಪ್ರತಿಷ್ಠಿತ ‘ಎನ್ಡಿಟಿವಿ ತಮಿಳುನಾಡು ಶೃಂಗಸಭೆ’ಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ವಿರೋಧ ಪಕ್ಷಗಳಾದ ಎಐಎಡಿಎಂಕೆ ಮತ್ತು ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಟೀಕಿಸುವವರನ್ನು ತರಾಟೆಗೆ ತೆಗೆದುಕೊಂಡ ಅವರು, ವಿರೋಧಿಗಳ ತಂತ್ರಗಾರಿಕೆಯನ್ನು “ವಾಟ್ಸಾಪ್ ಯೂನಿವರ್ಸಿಟಿ” (WhatsApp University) ಪಾಠಗಳೆಂದು ಲೇವಡಿ ಮಾಡಿದ್ದಾರೆ.
‘ವಾಷಿಂಗ್ ಮೆಷಿನ್’ ರಾಜಕೀಯ
ತಮ್ಮ ಭಾಷಣದ ಪ್ರಮುಖ ಭಾಗದಲ್ಲಿ ಸ್ಟಾಲಿನ್ ಅವರು ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಅಲಿಖಿತ ಮೈತ್ರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಹಿಂದೆ ಎಐಎಡಿಎಂಕೆ ನಾಯಕರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡುತ್ತಿದ್ದ ಬಿಜೆಪಿ, ಈಗ ಮೌನವಾಗಿರುವುದೇಕೆ ಎಂದು ಅವರು ಪ್ರಶ್ನಿಸಿದರು. “ಭ್ರಷ್ಟಾಚಾರದಲ್ಲಿ ಮುಳುಗಿದ್ದ ಎಐಎಡಿಎಂಕೆಯನ್ನು ಈಗ ನಿಮ್ಮ ‘ವಾಷಿಂಗ್ ಮೆಷಿನ್’ ನಲ್ಲಿ ಹಾಕಿ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆಯೇ?” ಎಂದು ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಮತ್ತು ಬಿಜೆಪಿ ನಾಯಕತ್ವವನ್ನು ನೇರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ | ಕ್ಯೂಬಾ ತೈಲ ಪೂರೈಕೆದಾರರಿಗೆ ಸುಂಕದ ಬ್ರಹ್ಮಾಸ್ತ್ರ: ಮೆಕ್ಸಿಕೊ ಮೇಲೆ ಟ್ರಂಪ್ ಹಿಡಿತ ಬಿಗಿ
ಭ್ರಷ್ಟಾಚಾರದ ಆರೋಪ ಹೊತ್ತವರು ಬಿಜೆಪಿಯೊಂದಿಗೆ ಕೈಜೋಡಿಸಿದ ತಕ್ಷಣ ಅವರ ಮೇಲಿನ ತನಿಖೆಗಳು ನಿಧಾನವಾಗುತ್ತವೆ ಅಥವಾ ನಿಲ್ಲುತ್ತವೆ ಎಂಬ ವಿಪಕ್ಷಗಳ ಸಾಮಾನ್ಯ ಟೀಕೆಯನ್ನು ಅವರು ಪುನರುಚ್ಚರಿಸಿದರು.
