ಕ್ಯೂಬಾದ ಕಮ್ಯುನಿಸ್ಟ್ ಸರ್ಕಾರದ ಮೇಲೆ ಆರ್ಥಿಕ ಒತ್ತಡವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಮತ್ತು ಕಠಿಣವಾದ ಹೆಜ್ಜೆಯನ್ನಿಟ್ಟಿದ್ದಾರೆ. ಕ್ಯೂಬಾಗೆ ತೈಲವನ್ನು ಮಾರಾಟ ಮಾಡುವ ಅಥವಾ ಪೂರೈಸುವ ಯಾವುದೇ ದೇಶದ ಸರಕುಗಳ ಮೇಲೆ ಸುಂಕ (Tariffs) ವಿಧಿಸುವ ಅಧಿಕಾರ ನೀಡುವ ಕಾರ್ಯಕಾರಿ ಆದೇಶಕ್ಕೆ (Executive Order) ಟ್ರಂಪ್ ಗುರುವಾರ ಸಹಿ ಹಾಕಿದ್ದಾರೆ. ಈ ನಡೆ ನೇರವಾಗಿ ದ್ವೀಪ ರಾಷ್ಟ್ರ ಕ್ಯೂಬಾವನ್ನು ಗುರಿಯಾಗಿಸಿಕೊಂಡಿದ್ದರೂ, ಇದು ಪರೋಕ್ಷವಾಗಿ ಅಮೆರಿಕದ ನೆರೆಯ ರಾಷ್ಟ್ರವಾದ ಮೆಕ್ಸಿಕೊದ ಮೇಲೆ ಪರಿಣಾಮವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಆದೇಶದ ಪ್ರಮುಖ ಅಂಶಗಳು
ಅಧ್ಯಕ್ಷ ಟ್ರಂಪ್ ಅವರ ಈ ಆದೇಶವು ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಕ್ಯೂಬಾ ಒಡ್ಡುವ ಬೆದರಿಕೆಯನ್ನು “ರಾಷ್ಟ್ರೀಯ ತುರ್ತು ಪರಿಸ್ಥಿತಿ” ಎಂದು ಘೋಷಿಸಿದೆ. ಈ ಆದೇಶದ ಪ್ರಕಾರ, ಕ್ಯೂಬಾಗೆ ನೇರವಾಗಿ ಅಥವಾ ಪರೋಕ್ಷವಾಗಿ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳನ್ನು ಒದಗಿಸುವ ಯಾವುದೇ ವಿದೇಶಿ ರಾಷ್ಟ್ರದ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕವನ್ನು ವಿಧಿಸಬಹುದಾಗಿದೆ. “ಕ್ಯೂಬಾ ಆಡಳಿತವು ಅಮೆರಿಕದ ವಿರೋಧಿಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ ಮತ್ತು ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ನೀಡುತ್ತಿದೆ,” ಎಂದು ಶ್ವೇತಭವನ ತನ್ನ ಪ್ರಕಟಣೆಯಲ್ಲಿ ಆರೋಪಿಸಿದೆ. ಈ ನಿರ್ಧಾರವು ಕ್ಯೂಬಾದ ಆರ್ಥಿಕತೆಯ ಜೀವನಾಡಿಯಾದ ಇಂಧನ ಪೂರೈಕೆಯನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿದೆ.
ಮೆಕ್ಸಿಕೊ ಮೇಲೆ ಒತ್ತಡ ತಂತ್ರ
ವೆನೆಜುವೆಲಾದಲ್ಲಿನ ರಾಜಕೀಯ ಬದಲಾವಣೆಗಳ ನಂತರ, ಕ್ಯೂಬಾಗೆ ತೈಲ ಪೂರೈಕೆ ಮಾಡುವ ಪ್ರಮುಖ ರಾಷ್ಟ್ರವಾಗಿ ಮೆಕ್ಸಿಕೊ ಹೊರಹೊಮ್ಮಿತ್ತು. ಮೆಕ್ಸಿಕೊದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ‘ಪೆಮೆಕ್ಸ್’ (Pemex) ಕಳೆದ ವರ್ಷದ ಬಹುಪಾಲು ಕ್ಯೂಬಾಗೆ ದಿನಕ್ಕೆ ಸುಮಾರು 20,000 ಬ್ಯಾರೆಲ್ ತೈಲವನ್ನು ರಫ್ತು ಮಾಡಿದೆ. ಟ್ರಂಪ್ ಅವರ ಈ ಹೊಸ ಆದೇಶವು ಮೆಕ್ಸಿಕೊ ಅಧ್ಯಕ್ಷೆ ಕ್ಲಾಡಿಯಾ ಶೀನ್ಬಾಮ್ (Claudia Sheinbaum) ಅವರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲಿದೆ.
ಈಗಾಗಲೇ ಮೆಕ್ಸಿಕೊ ಕ್ಯೂಬಾಗೆ ತೈಲ ಸಾಗಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಇದನ್ನು ಅಮೆರಿಕದ ಒತ್ತಡಕ್ಕೆ ಮಣಿದು ಮಾಡಲಾಗಿಲ್ಲ, ಬದಲಾಗಿ ಇದೊಂದು “ಸಾರ್ವಭೌಮ ನಿರ್ಧಾರ” ಎಂದು ಮೆಕ್ಸಿಕೊ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ಅಮೆರಿಕದ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಮೆಕ್ಸಿಕೊಗೆ, ಟ್ರಂಪ್ ಅವರ ಸುಂಕದ ಬೆದರಿಕೆ ಅತ್ಯಂತ ಗಂಭೀರವಾದ ವಿಷಯವಾಗಿದೆ.
