ಬೆಂಗಳೂರು (ಫೆ. 02, 2026): ಕಳೆದ ಕೆಲವು ವಾರಗಳಿಂದ ರಾಕೆಟ್ ವೇಗದಲ್ಲಿ ಮೇಲೇರುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರಗಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಕೇವಲ ಬ್ರೇಕ್ ಬಿದ್ದಿರುವುದಷ್ಟೇ ಅಲ್ಲ, ಮಾರುಕಟ್ಟೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭಾರೀ ಕುಸಿತವೊಂದು ಇಂದು ದಾಖಲಾಗಿದೆ. ಪ್ರಮುಖವಾಗಿ ಬೆಳ್ಳಿ ದರದಲ್ಲಿ ಒಂದೇ ದಿನ ಬರೋಬ್ಬರಿ 50,000 ರೂಪಾಯಿಗಳಷ್ಟು ಇಳಿಕೆಯಾಗುವ ಮೂಲಕ ಹೂಡಿಕೆದಾರರನ್ನು ಕಂಗಾಲಾಗಿಸಿದ್ದರೆ, ಆಭರಣ ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಐದು ದಿನಗಳ ಹಿಂದಷ್ಟೇ ಬೆಳ್ಳಿ ದರವು ಕೆ.ಜಿ.ಗೆ 4.10 ಲಕ್ಷ ರೂಪಾಯಿಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಈ ದರವನ್ನು ಕಂಡು ಸಾಮಾನ್ಯ ಜನರು ಬೆಳ್ಳಿ ಕಾಲುಂಗುರ ಖರೀದಿಸಲು ಕೂಡ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ವಾರಾಂತ್ಯದ ನಂತರ ಮಾರುಕಟ್ಟೆ ತೆರೆಯುತ್ತಿದ್ದಂತೆಯೇ ಬೆಳ್ಳಿ ದರವು ಇಳಿಕೆಯಾಗಿದ್ದು. ಒಂದೇ ದಿನದಲ್ಲಿ 50,000 ರೂ. ಇಳಿಕೆಯಾಗಿದೆ, ಪ್ರಸ್ತುತ ದರವು 3.60 ಲಕ್ಷ ರೂ. (ಅಂದಾಜು) ಆಸುಪಾಸಿಗೆ ಬಂದು ನಿಂತಿದೆ.
ಕುಸಿತಕ್ಕೆ ಕಾರಣವೇನು?
ಸಾಮಾನ್ಯವಾಗಿ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತದೆ. 2026ರ ಕೇಂದ್ರ ಬಜೆಟ್ನಲ್ಲಿ ಆಮದು ಸುಂಕ (Customs Duty) ಅಥವಾ ಚಿನ್ನ-ಬೆಳ್ಳಿ ಮೇಲಿನ ಸೆಸ್ (Cess) ಇಳಿಕೆ ಮಾಡಿರಬಹುದು ಎಂಬ ಊಹಾಪೋಹಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳು ಈ ಹಠಾತ್ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳಲ್ಲಿನ ಬದಲಾವಣೆ ಮತ್ತು ಜಾಗತಿಕವಾಗಿ ಡಾಲರ್ ಮೌಲ್ಯ ಚೇತರಿಸಿಕೊಂಡಿರುವುದು ಕೂಡ ಲೋಹಗಳ ಬೆಲೆ ಇಳಿಕೆಗೆ ಪರೋಕ್ಷ ಕಾರಣವಾಗಿದೆ.
ಲಾಭದಾಯಕವಾಯಿತೇ ಹೂಡಿಕೆ?
ಇತ್ತೀಚಿನ ದಿನಗಳಲ್ಲಿ ಬೆಳ್ಳಿ 4 ಲಕ್ಷದ ಗಡಿ ದಾಟಿದ್ದಾಗ ಯಾರು ಹೂಡಿಕೆ ಮಾಡಿದ್ದರೋ, ಅವರಿಗೆ ಇಂದು ದೊಡ್ಡ ಆಘಾತವಾಗಿದೆ. ಒಂದೇ ದಿನದಲ್ಲಿ ಕೆ.ಜಿ. ಮೇಲೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಆದರೆ, ಮದುವೆ ಸೀಸನ್ ಹತ್ತಿರ ಬರುತ್ತಿರುವುದರಿಂದ, ಯಾರು ಆಭರಣ ಖರೀದಿಸಲು ಕಾಯುತ್ತಿದ್ದರೋ ಅವರಿಗೆ ಇದು ಸುವರ್ಣಾವಕಾಶವಾಗಿದೆ.
ಇದನ್ನೂ ಓದಿ | ಸೌಂಡ್ ಪ್ರೂಫ್ ಕೊಠಡಿಯಲ್ಲಿ 20 ನಿಮಿಷಗಳ ಮೌನ: ಸಿ.ಜೆ. ರಾಯ್ ಆತ್ಮಹತ್ಯೆಯ ಆಘಾತಕಾರಿ ವಿಷಯ ಬಯಲು
ಬೆಳ್ಳಿ ದರದಲ್ಲಿನ ಈ ಮಹಾಕುಸಿತದ ಪರಿಣಾಮ ಚಿನ್ನದ ಮೇಲೂ ಬೀರಿದೆ. ವರದಿಗಳ ಪ್ರಕಾರ, ಚಿನ್ನದ ದರದಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಕಳೆದ ವಾರದ ಗರಿಷ್ಠ ಮಟ್ಟದಿಂದ ಕೆಳಗಿಳಿದಿವೆ. ಇನ್ನೂ 24 ಕ್ಯಾರಟ್ ಅಪರಂಜಿ ಚಿನ್ನದ 10ಗ್ರಾಂ ದರ ಇಂದು ಸೋಮವಾರ ಮತ್ತೆ 9050 ರೂಪಾಯಿ ಕುಸಿಯುವ ಮೂಲಕ 1,51,530 ರೂಪಾಯಿಗೆ ತಲುಪಿದೆ. ನೆನ್ನೆ ಭಾನುವಾರ (ಫೆಬ್ರವರಿ 1) ಇದರ ದರ 1,60, 580 ರೂಪಾಯಿ ಇತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಆಗುವ ಮುನ್ಸೂಚನೆ ಇದೆ. 22 ಕ್ಯಾರಟ್ ಆಭರಣ ಚಿನ್ನದ 10ಗ್ರಾಂ ಬೆಲೆ 8,300 ರೂಪಾಯಿ ಕುಸಿತ ಕಾಣುವ ಮೂಲಕ 1,38, ರೂಪಾಯಿಗೆ ಮುಟ್ಟಿದೆ. ಇದರ ಬೆಲೆ ನೆನ್ನೆ ಫೆಬ್ರವರಿ 1ರಂದು 1,47,200 ರೂಪಾಯಿ ಇತ್ತು. ಈ ಒಂದೇ ದಿನದಲ್ಲಿ ಭಾರೀ ಪ್ರಮಾಣದಲ್ಲಿ ಈ ಲೋಹಗಳ ದರದಲ್ಲಿ ವ್ಯತ್ಯಾಸವಾಗಿದೆ. ಇದು ಮದುವೆ ಸಮಾರಂಭಗಳಿಗೆ ಸಿದ್ಧತೆ ನಡೆಸುತ್ತಿರುವ ಕುಟುಂಬಗಳಿಗೆ ದೊಡ್ಡ ಮಟ್ಟದ ಉಳಿತಾಯಕ್ಕೆ ದಾರಿ ಮಾಡಿಕೊಟ್ಟಿದೆ.
