ಗದಗ: ಇದು ಕೇವಲ ಗುಡ್ಡವಲ್ಲ, ಒಡಲಲ್ಲಿ ಬಂಗಾರವನ್ನೇ ಬಚ್ಚಿಟ್ಟುಕೊಂಡಿರುವ ಕುಬೇರನ ಅರಮನೆ! ಹೌದು, ನಾವು ಹೇಳುತ್ತಿರುವುದು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲ್ಪಡುವ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಪ್ಪತಗುಡ್ಡದ ಬಗ್ಗೆ. ಇಲ್ಲಿನ ಮಣ್ಣಿನ ಕಣಕಣದಲ್ಲೂ ಚಿನ್ನವಿದೆ ಎಂಬ ಮಾತುಗಳು ಕೇವಲ ಊಹಾಪೋಹವಲ್ಲ ಎಂಬುದು ಇದೀಗ ಜನತಾ ಟಿವಿ ನಡೆಸಿದ ಈ ‘ರಿಯಾಲಿಟಿ ಚೆಕ್’ನಲ್ಲಿ ಸಾಬೀತಾಗಿದೆ.
ಪ್ರಾಣದ ಹಂಗು ತೊರೆದ ಸಾಹಸ:
ಜಲ್ಲಿಗೇರಿ ಹಾಗೂ ಮಹಾಲಿಂಗಪುರ ಗ್ರಾಮದ ನಡುವಿನ ಕಪ್ಪತಗುಡ್ಡದ ದಟ್ಟ ಕಾನನದ ನಡುವೆ ಇರುವ ನಿಗೂಢ ಗುಹೆಗಳತ್ತ ಜನತಾ ಟಿವಿ ತಂಡ ಹೆಜ್ಜೆ ಹಾಕಿತ್ತು. ಪ್ರಾಣದ ಹಂಗು ತೊರೆದು, ಕಡಿದಾದ ದಾರಿಯಲ್ಲಿ ಸಾಗಿ ಆಳವಾದ ಗುಹೆಯೊಳಗೆ ಇಳಿಯುತ್ತಿದ್ದಂತೆ ಕಂಡಿದ್ದು ಅಚ್ಚರಿಯ ದೃಶ್ಯ. ಗುಹೆಯ ದ್ವಾರ ಚಿಕ್ಕದಾಗಿದ್ದರೂ, ಒಳಗೆ ಹೋಗುತ್ತಿದ್ದಂತೆ ನಾಲ್ಕೈದು ಕವಲು ದಾರಿಗಳು ಎದುರಾಗುತ್ತವೆ. ಇದು ಸಾಮಾನ್ಯ ಗುಹೆಯಲ್ಲ, ಶತಮಾನಗಳ ಹಿಂದೆ ಬ್ರಿಟಿಷರು ಚಿನ್ನಕ್ಕಾಗಿ ಕೊರೆದ ಸುರಂಗ ಮಾರ್ಗಗಳು!
ಕ್ಯಾಮರಾದಲ್ಲಿ ಸೆರೆಯಾಯ್ತು ‘ಚಿನ್ನ’ದ ಹೊಳಪು:
ನಮ್ಮ ಕ್ಯಾಮರಾ ಕಣ್ಣು ಗುಹೆಯ ಕತ್ತಲನ್ನು ಸೀಳಿ ಕಲ್ಲಿನ ಗೋಡೆಗಳ ಮೇಲೆ ಬಿದ್ದಾಗ, ಅಲ್ಲಿ ಕಂಡಿದ್ದು ಫಳ ಫಳ ಹೊಳೆಯುವ ದೃಶ್ಯ! ಹೌದು, ಬಂಡೆಗಳ ನಡುವೆ ಚಿನ್ನದ ಅದಿರಿನ ನಿಕ್ಷೇಪಗಳು ಸ್ಪಷ್ಟವಾಗಿ ಗೋಚರಿಸಿವೆ. ಕಲ್ಲಿನ ಪದರಗಳಲ್ಲಿ ಅಡಗಿರುವ ಹಳದಿ ಲೋಹದ ಹೊಳಪು ಜನತಾ ಟಿವಿ ಕ್ಯಾಮರಾದಲ್ಲಿ ಎಕ್ಸ್ಕ್ಲೂಸಿವ್ ಆಗಿ ಸೆರೆಯಾಗಿದೆ.
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಬ್ರಿಟಿಷರ ಕಾಲದಲ್ಲೇ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿತ್ತು ಎಂಬುದು ತಿಳಿಯುತ್ತದೆ. ಸುಮಾರು ಎರಡು-ಮೂರು ಕಿಲೋಮೀಟರ್ಗಳಷ್ಟು ಆಳಕ್ಕೆ ಸುರಂಗಗಳನ್ನು ಕೊರೆದು, ಫಿರಂಗಿಗಳು ಇಲ್ಲಿನ ಸಂಪತ್ತನ್ನು ದೋಚಿದ್ದಾರೆ. ಅವರು ಬಿಟ್ಟು ಹೋದ ಕುರುಹುಗಳೇ ಈ ಬೃಹತ್ ಗುಹೆಗಳು. ಇಂದಿಗೂ ಆ ಗುಹೆಗಳ ಆಳದಲ್ಲಿ ಟನ್ ಗಟ್ಟಲೆ ಚಿನ್ನದ ನಿಕ್ಷೇಪ ಸುಪ್ತವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | ಗುತ್ತಿಗೆದಾರರ ಸಂಘದಲ್ಲೇ ‘ಕಮಿಷನ್’ ದಂಧೆ?: ವೈರಲ್ ಆಡಿಯೋದಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ
ಕಂಪನಿಗಳ ಕಣ್ಣು vs ಪರಿಸರವಾದಿಗಳ ಹೋರಾಟ:
ಈಗಲೂ ಕೂಡ ದೇಶ-ವಿದೇಶದ ಹಲವಾರು ಬೃಹತ್ ಕಂಪನಿಗಳು ಕಪ್ಪತಗುಡ್ಡದ ಚಿನ್ನದ ಮೇಲೆ ಕಣ್ಣಿಟ್ಟಿವೆ. ಆದರೆ, ಇಲ್ಲಿನ ಅಪರೂಪದ ಔಷಧಿ ಸಸ್ಯಗಳು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಪರಿಸರವಾದಿಗಳು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟದ ಫಲವಾಗಿಯೇ ಸದ್ಯ ಈ ಪ್ರದೇಶ ರಕ್ಷಣೆಗೊಳಗಾಗಿದೆ ಮತ್ತು ಗಣಿಗಾರಿಕೆಗೆ ನಿಷೇಧವಿದೆ.
ಸದ್ಯ ಸಾರ್ವಜನಿಕರಿಗೆ ಈ ಗುಹೆಗಳ ಪ್ರವೇಶಕ್ಕೆ ನಿಷೇಧವಿದ್ದರೂ, ಕಪ್ಪತಗುಡ್ಡದ ಗರ್ಭದಲ್ಲಿ ಅಡಗಿರುವ ಈ ಸತ್ಯವನ್ನು ಜನರೆದುರು ಇಡಲು ಜನತಾ ಟಿವಿ ಈ ಸಾಹಸಕ್ಕೆ ಕೈಹಾಕಿತ್ತು. ಈ ದೃಶ್ಯಗಳು ಕಪ್ಪತಗುಡ್ಡದ ಮೌಲ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿ ಹೇಳಿವೆ.
