ಬೆಂಗಳೂರು: ದುನಿಯಾ ವಿಜಯ್ ಅಭಿನಯದ, ಜಡೇಶ್ ಕೆ. ಹಂಪಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಲ್ಯಾಂಡ್ ಲಾರ್ಡ್’ (Land Lord) ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಚಿತ್ರತಂಡಕ್ಕೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಜನವರಿ 23, 2026 ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಶೇ.100 ರಷ್ಟು ತೆರಿಗೆ ವಿನಾಯಿತಿ (Tax Exemption) ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
‘ಲ್ಯಾಂಡ್ ಲಾರ್ಡ್’ ಸಿನಿಮಾವು ಕೇವಲ ಮನರಂಜನೆಯ ಚಿತ್ರವಾಗಿರದೆ, ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ಪದ್ಧತಿ, ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದೆ. ಚಿತ್ರದ ನೈಜ ನಿರೂಪಣೆ ಮತ್ತು ಅದು ಸಮಾಜಕ್ಕೆ ನೀಡುತ್ತಿರುವ ಸಂದೇಶವನ್ನು ಗಮನಿಸಿದ ಮುಖ್ಯಮಂತ್ರಿಗಳು, ಇಂತಹ ಮೌಲ್ಯಯುತ ಸಿನಿಮಾಗಳು ಹೆಚ್ಚು ಜನರನ್ನು ತಲುಪಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. “ಸಾಮಾಜಿಕ ಕಳಕಳಿಯ ವಿಷಯದ ಸಿನಿಮಾಗಳಿಗೆ ಬೆಂಬಲ ನೀಡುವುದು ಸರ್ಕಾರದ ನೈತಿಕ ಹೊಣೆ,” ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರತಂಡಕ್ಕೆ ಆನೆಬಲ:
ಈ ಹಿಂದೆ ಚಿತ್ರತಂಡವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತೆರಿಗೆ ವಿನಾಯಿತಿಗಾಗಿ ಮನವಿ ಮಾಡಿತ್ತು. ಇದೀಗ ಸಿಎಂ ಅವರ ಅಧಿಕೃತ ಸೂಚನೆಯಿಂದಾಗಿ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಸಾಮಾನ್ಯವಾಗಿ ತೆರಿಗೆ ವಿನಾಯಿತಿ ಸಿಕ್ಕರೆ ಟಿಕೆಟ್ ದರಗಳಲ್ಲಿ ಇಳಿಕೆಯಾಗುತ್ತದೆ. ಇದರಿಂದ ಮಧ್ಯಮ ವರ್ಗದ ಮತ್ತು ಗ್ರಾಮೀಣ ಭಾಗದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರಲು ಸಾಧ್ಯವಾಗುತ್ತದೆ.
ಇದನ್ನೂ ಓದಿ | ಕತ್ತಲ ಗುಹೆಯೊಳಗೆ ‘ಬಂಗಾರ’ದ ಬೆಳಕು! ಕಪ್ಪತಗುಡ್ಡದ ರಹಸ್ಯ ಬಯಲು
ದುನಿಯಾ ವಿಜಯ್ ಅವರು ‘ರಾಚಯ್ಯ’ನ ಪಾತ್ರದಲ್ಲಿ ಅಬ್ಬರಿಸಿದ್ದರೆ, ನಟ ರಾಜ್ ಬಿ. ಶೆಟ್ಟಿ ಅವರು ಖಳನಾಯಕನಾಗಿ ಗಮನ ಸೆಳೆದಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದು, ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ ಈ ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿದೆ. ಈಗ ಸರ್ಕಾರದ ಬೆಂಬಲದೊಂದಿಗೆ ‘ಲ್ಯಾಂಡ್ ಲಾರ್ಡ್’ ಮತ್ತಷ್ಟು ಹೊಸ ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ.
