ಗದಗ: ಅದು ಐತಿಹಾಸಿಕ ಲಕ್ಕುಂಡಿ ಗ್ರಾಮ. ಅಲ್ಲಿನ ಬಡ ಕುಟುಂಬವೊಂದು ತಮಗೆ ಸಿಕ್ಕ ಕೋಟ್ಯಂತರ ರೂಪಾಯಿ ಮೌಲ್ಯದ ಐತಿಹಾಸಿಕ ನಿಧಿಯನ್ನು ಮುಚ್ಚಿಟ್ಟುಕೊಳ್ಳದೇ, ಅತ್ಯಂತ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಹಸ್ತಾಂತರಿಸಿತ್ತು. ಈ ಪ್ರಾಮಾಣಿಕತೆಯನ್ನು ಮೆಚ್ಚಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಬಹುಮಾನದ ಮಳೆಯನ್ನೇ ಸುರಿಸಿದ್ದರು. ಆದರೆ, ಘೋಷಣೆಯಾಗಿ ಇಷ್ಟು ದಿನಗಳು ಉರುಳಿದರೂ ಆ ಬಹುಮಾನದ ಹಣ ಇಂದಿಗೂ ಸಂತ್ರಸ್ತ ಕುಟುಂಬದ ಕೈಸೇರದಿರುವುದು ವ್ಯವಸ್ಥೆಯ ವಿಪರ್ಯಾಸಕ್ಕೆ ಹಿಡಿದ ಕನ್ನಡಿಯಾಗಿದೆ.
ಲಕ್ಕುಂಡಿಯ ಪ್ರಜ್ವಲ್ ರಿತ್ತಿ (Prajwal Ritti) ಅವರ ಕುಟುಂಬಕ್ಕೆ ಮನೆಯ ಅಡಿಪಾಯ ಅಗೆಯುವಾಗ ಐತಿಹಾಸಿಕ ಚಿನ್ನದ ನಾಣ್ಯಗಳು ಮತ್ತು ಆಭರಣಗಳು ಲಭ್ಯವಾಗಿದ್ದವು. ಆಸೆಗೆ ಬೀಳದ ಕುಟುಂಬ, ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ನಿಧಿಯನ್ನು ಹಸ್ತಾಂತರಿಸಿತ್ತು. ನಿಧಿ ಸಿಕ್ಕ ಕೇವಲ ಮೂರು ಗಂಟೆಯೊಳಗೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಈ ಪ್ರಾಮಾಣಿಕತೆಗಾಗಿ ಗಣರಾಜ್ಯೋತ್ಸವದಂದು (Republic Day) ಸ್ವತಃ ಗದಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಚ್.ಕೆ. ಪಾಟೀಲ್ (H.K. Patil) ಅವರು ತಮ್ಮ ವಿವೇಚನಾ ನಿಧಿಯಿಂದ 5 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು. ಜೊತೆಗೆ ಪಂಚಾಯತ್ ವತಿಯಿಂದ ಒಂದು ನಿವೇಶನವನ್ನೂ ನೀಡುವುದಾಗಿ ಭರವಸೆ ನೀಡಲಾಗಿತ್ತು.
ಬ್ಯಾಂಕಿಗೆ ಅಲೆದಾಟವೇ ಬದುಕು:
ಸಚಿವರು ಬಹುಮಾನ ಘೋಷಿಸಿ ಆದೇಶ ಹೊರಡಿಸಿ 10 ದಿನಗಳೇ ಕಳೆದಿವೆ (ಘಟನೆ ನಡೆದು ತಿಂಗಳಾಗಿದೆ). ಆದರೆ, ಘೋಷಣೆಯಾದ 5 ಲಕ್ಷ ರೂಪಾಯಿ ಇನ್ನೂ ಕುಟುಂಬದ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ. ಮನೆ ಕಟ್ಟಿಕೊಳ್ಳಲು ಆ ಹಣವನ್ನೇ ನಂಬಿಕೊಂಡಿರುವ ರಿತ್ತಿ ಕುಟುಂಬ, ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಪ್ರತಿನಿತ್ಯ ಬ್ಯಾಂಕಿಗೆ ಅಲೆದಾಡಿ ಸುಸ್ತಾಗಿದೆ. ಬಹುಮಾನ ಕೇವಲ ಪತ್ರದಲ್ಲಿ ಮತ್ತು ವೇದಿಕೆಯ ಮೇಲಿನ ಭಾಷಣದಲ್ಲಿ ಮಾತ್ರ ಸೀಮಿತವಾಗಿದ್ದು, ವಾಸ್ತವದಲ್ಲಿ ನಯಾಪೈಸೆ ಕೈಸೇರಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಕುಟುಂಬಕ್ಕೆ ನೀಡುವುದಾಗಿ ಹೇಳಲಾದ ನಿವೇಶನದ (Site) ಕತೆಯೂ ಗೊಂದಲದ ಗೂಡಾಗಿದೆ. ಪಂಚಾಯತಿಯಿಂದ ಜಾಗ ಕೊಡುವುದಾಗಿ ಹೇಳಿದ್ದರೂ, ಯಾವ ಜಾಗ, ಅದರ ಪ್ಲಾಟ್ ನಂಬರ್ ಯಾವುದು ಎನ್ನುವ ಯಾವ ಮಾಹಿತಿಯನ್ನೂ ಇನ್ನೂ ಕುಟುಂಬಕ್ಕೆ ಅಧಿಕೃತವಾಗಿ ತಿಳಿಸಿಲ್ಲ. ಇದರಿಂದಾಗಿ ಅತ್ತ ಹಣವೂ ಇಲ್ಲ, ಇತ್ತ ಜಾಗವೂ ಇಲ್ಲ ಎಂಬಂತಾಗಿ ಕುಟುಂಬ ತ್ರಿಶಂಕು ಸ್ಥಿತಿಯಲ್ಲಿದೆ.
ಇದನ್ನೂ ಓದಿ | ಕತ್ತಲ ಗುಹೆಯೊಳಗೆ ‘ಬಂಗಾರ’ದ ಬೆಳಕು! ಕಪ್ಪತಗುಡ್ಡದ ರಹಸ್ಯ ಬಯಲು
ನಿಧಿ ಸಿಕ್ಕಾಗ ಮಿಂಚಿನ ವೇಗದಲ್ಲಿ ಬಂದು ವಶಪಡಿಸಿಕೊಂಡ ಅಧಿಕಾರಿಗಳು, ಈಗ ಬಹುಮಾನ ನೀಡುವ ವಿಷಯದಲ್ಲಿ ಮಾತ್ರ ತೀರಾ ನಿಧಾನಗತಿ ಅನುಸರಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಪ್ರಾಮಾಣಿಕತೆಗೆ ತಕ್ಕ ಪ್ರತಿಫಲವನ್ನು ಶೀಘ್ರವಾಗಿ ತಲುಪಿಸುವ ಕೆಲಸ ಮಾಡಬೇಕಿದೆ.
