ಬೆಂಗಳೂರು: “ಗೀತರಚನೆ ಎನ್ನುವುದು ಯಾರೋ ಕಲಿಸಿದರೆ ಕಲಿಯುವಂತದ್ದಲ್ಲ. ಅದು ನಮ್ಮ ಸುಪ್ತಮನಸ್ಸಿನಿಂದ ಸಹಜವಾಗಿ ಹೊರಹೊಮ್ಮಬೇಕು. ಅದಕ್ಕಾಗಿ ಕನ್ನಡ ಸಾಹಿತ್ಯದ ಓದು ಮತ್ತು ಜನಜೀವನದ ಅನುಭವ ಮುಖ್ಯ,” ಎಂದು ಖ್ಯಾತ ಕವಿ ಹಾಗೂ ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.
ನಗರದಲ್ಲಿ ನಡೆಯುತ್ತಿರುವ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿನಿಮಾ ಗೀತರಚನೆಯ ಪ್ರಕ್ರಿಯೆ ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸ್ವಂತಿಕೆ ಮುಖ್ಯ, ತರಬೇತಿಯಲ್ಲ:
ಗೀತರಚನೆಗೆ ಯಾವುದೇ ನಿರ್ದಿಷ್ಟ ಕಾರ್ಯಾಗಾರ ಅಥವಾ ತರಬೇತಿ ಇರುವುದಿಲ್ಲ. ನಿರ್ದೇಶನ ಅಥವಾ ನಟನೆಯಂತೆ ಇದನ್ನು ಕಲಿತು ಮಾಡುವ ಹಾಗಿಲ್ಲ. “ಒಂದು ವೇಳೆ ತರಬೇತಿ ಪಡೆದು ಬರೆದರೆ, ಅದು ಜಿಮ್ ನಿಂದ ತಯಾರಾಗಿ ಬಂದ ದೇಹಗಳಂತೆ ಅಥವಾ ಬ್ಯೂಟಿ ಪಾರ್ಲರ್ ನಿಂದ ಬಂದ ವಧುವಿನಂತೆ ಒಂದೇ ರೀತಿ ಕಾಣುತ್ತದೆ. ಅಲ್ಲಿ ವೈವಿಧ್ಯತೆ ಇರುವುದಿಲ್ಲ. ನಿಮ್ಮದೇ ಆದ ಛಾಪು ಮೂಡಿಸಬೇಕೆಂದರೆ ಸ್ವತಂತ್ರವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು,” ಎಂದು ಕಾಯ್ಕಿಣಿ ಹೇಳಿದರು.
“ಹಳೆಯ ಕಾಲವೇ ಚೆನ್ನಾಗಿತ್ತು, ಈಗಿನ ಕಾಲ ಕೆಟ್ಟಿದೆ ಎನ್ನುವ ಮನೋಭಾವ ಸರಿಯಲ್ಲ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ತಂತ್ರಜ್ಞಾನ ಬೆಳೆಯುತ್ತಿದೆ, ಹೊಸ ತಲೆಮಾರಿನ ಆಲೋಚನೆಗಳು ಬದಲಾಗಿವೆ. ನಾವೂ ಕೂಡ ಕಾಲದ ಜೊತೆ ಹೆಜ್ಜೆ ಹಾಕಬೇಕು,” ಎಂದು ಸಲಹೆ ನೀಡಿದರು.
52ನೇ ವಯಸ್ಸಿಗೆ ಚಿತ್ರಸಾಹಿತಿಯಾದೆ:
ತಮ್ಮ ಸಿನಿಪಯಣವನ್ನು ಮೆಲುಕು ಹಾಕಿದ ಕಾಯ್ಕಿಣಿ, “ನಾನು ಯೌವನದಲ್ಲಿದ್ದಾಗ ಗಂಭೀರ ಸಾಹಿತ್ಯ ರಚಿಸಿದೆ. ಆದರೆ ಸಿನಿಮಾ ಹಾಡುಗಳನ್ನು ಬರೆಯಲು ಶುರು ಮಾಡಿದ್ದು ನನ್ನ 52ನೇ ವಯಸ್ಸಿನಲ್ಲಿ. ಆರಂಭದಲ್ಲಿ ಇದೊಂದು ಸುಲಭದ ಕೆಲಸ ಅಂದುಕೊಂಡಿದ್ದೆ. ಆದರೆ ಟ್ಯೂನ್ (Tune) ಅಥವಾ ಮೀಟರ್ ಗೆ ತಕ್ಕಂತೆ ಸಾಹಿತ್ಯ ಬರೆಯುವುದು ದೊಡ್ಡ ಸವಾಲು. ಅದರಲ್ಲೂ ಶೇ. 97ರಷ್ಟು ಪ್ರೇಮಗೀತೆಗಳೇ ಇರುತ್ತವೆ. ಒಲವು, ನಲಿವು, ಹಸಿರು, ಉಸಿರು ಎಂಬ ಸೀಮಿತ ಪದಗಳನ್ನೇ ಬಳಸಿ ಹೊಸ ಭಾವನೆಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸ,” ಎಂದು ವಿವರಿಸಿದರು.
ಸಿನಿಮಾ ಹಾಡುಗಳನ್ನು ಬರೆಯಲು ಆರಂಭಿಸಿದಾಗ ಕೆಲವರು ಮೂಗು ಮುರಿದರು. ಆದರೆ ಇದರಿಂದ ನನಗೆ ಲಾಭವೇ ಆಯಿತು. ಇದೊಂದು ರೀತಿಯ ‘ರಿವರ್ಸ್ ಆಸ್ಮೋಸಿಸ್’ (Reverse Osmosis) ಪ್ರಕ್ರಿಯೆಯಂತಾಯಿತು. ನನ್ನ ಸಿನಿಮಾ ಹಾಡುಗಳನ್ನು ಇಷ್ಟಪಟ್ಟ ಹೊಸ ತಲೆಮಾರಿನವರು, ನನ್ನ ಕಥೆ ಮತ್ತು ಕವನಗಳನ್ನು ಹುಡುಕಿಕೊಂಡು ಬಂದು ಓದಲು ಆರಂಭಿಸಿದರು. ಇದರಿಂದ ನನ್ನ ಪುಸ್ತಕಗಳು ಮರುಮುದ್ರಣಗೊಂಡವು ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ | “ಮಹಿಳಾ ಪ್ರಧಾನ ಚಿತ್ರಗಳೆಲ್ಲವೂ ಮಹಿಳಾ ಪರವಾಗಿರುವುದಿಲ್ಲ”: ಲೇಖಕಿ ಸಂಧ್ಯಾರಾಣಿ
‘ಪೊನ್ನಿಯನ್ ಸೆಲ್ವನ್’ ಅನುಭವ:
ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವನ್’ ಚಿತ್ರಕ್ಕೆ ಸಾಹಿತ್ಯ ಬರೆದ ಅನುಭವ ಹಂಚಿಕೊಂಡ ಅವರು, “ನಾನು ಭಾಷಾಂತರ ಮಾಡುವುದಿಲ್ಲ, ಸ್ವತಂತ್ರವಾಗಿ ಬರೆಯುತ್ತೇನೆ ಎಂದಿದ್ದೆ. ಮಣಿರತ್ನಂ ಅದಕ್ಕೆ ಒಪ್ಪಿದರು. ತಮಿಳಿನಲ್ಲಿ ‘ಕಾದಲ್’ ಎಂದರೆ ತುಟಿಗಳು ಒಂದಕ್ಕೊಂದು ತಾಕುವುದಿಲ್ಲ. ಆದರೆ ಕನ್ನಡದಲ್ಲಿ ‘ಪ್ರೀತಿ-ಪ್ರೇಮ’ ಎನ್ನಲು ತುಟಿ ಕೂಡಲೇಬೇಕು. ತುಟಿ ಕೂಡಿಸದೇ ಹೇಗೆ ಪ್ರೀತಿ ಮಾಡುತ್ತೀರಿ ಎಂದು ಮಣಿರತ್ನಂ ಅವರಿಗೆ ತಮಾಷೆ ಮಾಡಿದ್ದೆ,” ಎಂದು ನೆನಪಿಸಿಕೊಂಡರು.
