ಅಮೆರಿಕದ ನ್ಯಾಯಾಂಗ ಇಲಾಖೆಯು ಜನವರಿ 30, 2026 ರಂದು ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಪುಟಗಳ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಈ “ಎಪ್ಸ್ಟೀನ್ ಫೈಲ್ಸ್” (Epstein Files) ಎಂದು ಕರೆಯಲ್ಪಡುವ ದಾಖಲೆಗಳು ವಿಶ್ವದ ಶ್ರೀಮಂತ ಮತ್ತು ಪ್ರಭಾವಶಾಲಿ ವ್ಯಕ್ತಿಗಳ ಸುತ್ತಲಿರುವ ಅನುಮಾನದ ಹುತ್ತವನ್ನು ಮತ್ತೆ ಕೆದಕಿವೆ.
ಅಮೆರಿಕದ ಸರ್ಕಾರದ ಹೊಸ ತನಿಖಾ ವರದಿಯ ಭಾಗವಾಗಿ ಸುಮಾರು 30 ಲಕ್ಷ ಪುಟಗಳಷ್ಟು ದಾಖಲೆಗಳು, 1,80,000 ಚಿತ್ರಗಳು ಮತ್ತು 2,000 ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ. 2025 ರ ನವೆಂಬರ್ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ “ಎಪ್ಸ್ಟೀನ್ ಫೈಲ್ಸ್ ಪಾರದರ್ಶಕತೆ ಕಾಯಿದೆ” ಅಡಿಯಲ್ಲಿ ಈ ಕಡತಗಳನ್ನು ಬಹಿರಂಗಪಡಿಸಲಾಗಿದೆ. ಇದು ಎಪ್ಸ್ಟೀನ್ ಪ್ರಕರಣದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಾಖಲೆ ಬಿಡುಗಡೆಯಾಗಿದೆ.
ಪ್ರಮುಖ ಗಣ್ಯರ ಹೆಸರುಗಳು ಮತ್ತು ಉಲ್ಲೇಖಗಳು
ಬಿಡುಗಡೆಯಾದ ಕಡತಗಳಲ್ಲಿ ತಂತ್ರಜ್ಞಾನ ದಿಗ್ಗಜರಾದ ಬಿಲ್ ಗೇಟ್ಸ್, ಟೆಸ್ಲಾ ಸಿಇಒ ಎಲಾನ್ ಮಸ್ಕ್, ವರ್ಜಿನ್ ಗ್ರೂಪ್ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಮತ್ತು ಬ್ರಿಟನ್ ರಾಜಮನೆತನದ ಪ್ರಿನ್ಸ್ ಆಂಡ್ರ್ಯೂ ಅವರಂತಹ ಪ್ರಮುಖರ ಹೆಸರುಗಳು ಕೇಳಿಬಂದಿವೆ.
ಎಲಾನ್ ಮಸ್ಕ್: ಎಪ್ಸ್ಟೀನ್ ಮತ್ತು ಮಸ್ಕ್ ನಡುವಿನ ಇಮೇಲ್ ಸಂಭಾಷಣೆಗಳು ಬಹಿರಂಗಗೊಂಡಿವೆ. ಇದರಲ್ಲಿ ಎಪ್ಸ್ಟೀನ್ ಅವರ ಖಾಸಗಿ ದ್ವೀಪಕ್ಕೆ ಭೇಟಿ ನೀಡುವ ದಿನಾಂಕಗಳ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಗಳು ಹೇಳಿವೆ. ಆದರೆ, ಮಸ್ಕ್ ಅವರು ತಾವು ಎಂದಿಗೂ ಎಪ್ಸ್ಟೀನ್ ದ್ವೀಪಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಲ್ ಗೇಟ್ಸ್: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಬಗ್ಗೆಯೂ ಕೆಲವು ಗಂಭೀರ ಆರೋಪಗಳಿರುವ ಇಮೇಲ್ ಕರಡುಗಳು ಪತ್ತೆಯಾಗಿವೆ. ಎಪ್ಸ್ಟೀನ್, ಗೇಟ್ಸ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಸ್ಫೋಟಕ ಮಾಹಿತಿಯನ್ನು ಹೊಂದಿದ್ದನೆಂಬ ಉಲ್ಲೇಖವಿದೆ. ಆದರೆ ಗೇಟ್ಸ್ ಅವರ ವಕ್ತಾರರು ಈ ಆರೋಪಗಳನ್ನು “ಸಂಪೂರ್ಣ ಅಸಂಬದ್ಧ” ಎಂದು ತಳ್ಳಿಹಾಕಿದ್ದಾರೆ.
ರಿಚರ್ಡ್ ಬ್ರಾನ್ಸನ್: ಬ್ರಾನ್ಸನ್ ಅವರು ಎಪ್ಸ್ಟೀನ್ ಅವರಿಗೆ ಕಳುಹಿಸಿದ ಇಮೇಲ್ ಒಂದರಲ್ಲಿ, “ಮುಂದಿನ ಬಾರಿ ಬರುವಾಗ ನಿಮ್ಮ ‘ಹರೆಮ್’ (ಮಹಿಳೆಯರ ಗುಂಪು) ಅನ್ನು ಕರೆತನ್ನಿ” ಎಂದು ತಮಾಷೆಯಾಗಿ ಬರೆದಿದ್ದರೆನ್ನಲಾದ ಪತ್ರವೊಂದು ವೈರಲ್ ಆಗಿದೆ.
ಇದನ್ನೂ ಓದಿ | ಕತ್ತಲ ಗುಹೆಯೊಳಗೆ ‘ಬಂಗಾರ’ದ ಬೆಳಕು! ಕಪ್ಪತಗುಡ್ಡದ ರಹಸ್ಯ ಬಯಲು
ಅಮೆರಿಕದ ನ್ಯಾಯಾಂಗ ಇಲಾಖೆಯು, ಸಂತ್ರಸ್ತರ ಗೌಪ್ಯತೆಯನ್ನು ಕಾಪಾಡಲು ಹಲವು ಸೂಕ್ಷ್ಮ ಮಾಹಿತಿಯನ್ನು ಮರೆಮಾಚಿದೆ (Redact). ಏನೇ ಆದರೂ, ಈ ಹೊಸ ಮಾಹಿತಿಯು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದು, ಸತ್ಯಾಸತ್ಯತೆಯನ್ನು ತಿಳಿಯಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
