ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ನಿನ್ನೇಯಷ್ಟೇ ನಮ್ಮ ಮೆಟ್ರೋ (Namma Metro) ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿತ್ತು. ಆ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಇದೀಗ ಜಲಮಂಡಳಿ (BWSSB) ಕೂಡ ನೀರಿನ ದರ ಏರಿಕೆಗೆ ಸಜ್ಜಾಗಿದ್ದು, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.
ಶೀಘ್ರದಲ್ಲೇ ಶೇ. 3 ರಷ್ಟು ಹೆಚ್ಚಳ:
ರಾಜ್ಯ ಆಡಳಿತ ಸುಧಾರಣಾ ಆಯೋಗವು (Administrative Reforms Commission) ಸಲ್ಲಿಸಿರುವ ಶಿಫಾರಸಿನ ಅನ್ವಯ, ನೀರಿನ ದರದಲ್ಲಿ ಶೇ. 3 ರಷ್ಟು ಹೆಚ್ಚಳ ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಚಿಂತನೆ ನಡೆಸಿದೆ. ಈ ಹಿಂದೆಯೇ ಆಯೋಗವು ಪ್ರತಿ ವರ್ಷ ನೀರಿನ ದರವನ್ನು ಪರಿಷ್ಕರಣೆ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿತ್ತು. ನಿರ್ವಹಣಾ ವೆಚ್ಚಗಳು, ವಿದ್ಯುತ್ ದರ ಮತ್ತು ಸಿಬ್ಬಂದಿ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ನೀರಿನ ದರ ಏರಿಕೆ ಅನಿವಾರ್ಯ ಎಂದು ಮಂಡಳಿ ಸಮರ್ಥಿಸಿಕೊಂಡಿದೆ.
ಏರಿಕೆಗೆ ಪ್ರಮುಖ ಕಾರಣಗಳು:
ಬೆಂಗಳೂರಿಗೆ ಕಾವೇರಿ ನೀರನ್ನು ಸರಬರಾಜು ಮಾಡುವುದು ಅತ್ಯಂತ ದುಬಾರಿ ಪ್ರಕ್ರಿಯೆಯಾಗಿದೆ. ಸುಮಾರು 100 ಕಿಲೋಮೀಟರ್ ದೂರದ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ (T.K. Halli) ಮತ್ತು ಇತರ ಹಂತಗಳಿಂದ ನೀರನ್ನು ನಗರಕ್ಕೆ ಪಂಪ್ ಮಾಡಬೇಕಾಗುತ್ತದೆ. ಇದಕ್ಕೆ ಭಾರೀ ಪ್ರಮಾಣದ ವಿದ್ಯುತ್ ಅಗತ್ಯವಿದ್ದು, ಬೆಸ್ಕಾಂಗೆ (BESCOM) ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ವಿದ್ಯುತ್ ದರ ಏರಿಕೆಯಾಗಿರುವುದರಿಂದ ಜಲಮಂಡಳಿಯ ಆರ್ಥಿಕ ಹೊರೆಯೂ ಹೆಚ್ಚಾಗಿದೆ. ಹೀಗಾಗಿ, ಆರ್ಥಿಕ ಸಮತೋಲನ ಕಾಪಾಡಿಕೊಳ್ಳಲು ನೀರಿನ ದರ ಏರಿಕೆ ಅನಿವಾರ್ಯವಾಗಿದೆ ಎನ್ನಲಾಗಿದೆ.
ಗಾಯದ ಮೇಲೆ ಬರೆ:
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮನೆ ಬಾಡಿಗೆ ಹೆಚ್ಚಳ ಮತ್ತು ಇತ್ತೀಚಿನ ಮೆಟ್ರೋ ದರ ಏರಿಕೆಯಿಂದ ಹೈರಾಣಾಗಿರುವ ಬೆಂಗಳೂರಿಗರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಗೃಹಬಳಕೆ (Domestic) ಹಾಗೂ ವಾಣಿಜ್ಯ ಬಳಕೆಯ (Commercial) ನೀರಿನ ದರಗಳೆರಡರಲ್ಲೂ ಈ ಹೆಚ್ಚಳ ಅನ್ವಯವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ | ಕರ್ನಾಟಕದ ದಾಹ ತೀರಿಸಿ ಎಂದು ಕೇಂದ್ರಕ್ಕೆ ಎಚ್.ಡಿ. ದೇವೇಗೌಡರ ಮನವಿ
ಸರ್ಕಾರದಿಂದ ಅಧಿಕೃತ ಆದೇಶ ಬರುವುದು ಬಾಕಿಯಿದ್ದು, ಒಮ್ಮೆ ಅನುಮೋದನೆ ಸಿಕ್ಕರೆ ಮುಂದಿನ ತಿಂಗಳಿನಿಂದಲೇ ಹೊಸ ದರ ಜಾರಿಗೆ ಬರುವ ಸಾಧ್ಯತೆಗಳಿವೆ. ಪ್ರತಿ ವರ್ಷ ದರ ಏರಿಕೆಯಾಗುವ ನೀತಿಯನ್ನು ಜಾರಿಗೊಳಿಸಿದರೆ, ಇನ್ನು ಮುಂದೆ ಪ್ರತಿ ವರ್ಷವೂ ನೀರಿನ ಬಿಲ್ ಏರಿಕೆಯಾಗಲಿದೆ ಎಂಬ ಆತಂಕ ಗ್ರಾಹಕರಲ್ಲಿ ಮನೆಮಾಡಿದೆ.
