ನವದೆಹಲಿ: ಕರ್ನಾಟಕದ ನೆಲ, ಜಲ ಮತ್ತು ರೈತರ ಪರವಾಗಿ ಸದಾ ಧ್ವನಿ ಎತ್ತುತ್ತಲೇ ಬಂದಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು (H.D. Deve Gowda), ಬುಧವಾರ ರಾಜ್ಯಸಭೆಯಲ್ಲಿ ಮತ್ತೊಮ್ಮೆ ಭಾವುಕರಾದ ಪ್ರಸಂಗ ನಡೆಯಿತು. ರಾಜ್ಯ ಎದುರಿಸುತ್ತಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆ ಮತ್ತು ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುತ್ತಾ, “ದಯಮಾಡಿ ನಮ್ಮ ರಾಜ್ಯದ ನೀರಿನ ಸಮಸ್ಯೆಯನ್ನು ಬಗೆಹರಿಸಿ,” ಎಂದು ಕೇಂದ್ರ ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿದರು.
ರಾಜ್ಯಸಭೆಯಲ್ಲಿ ಬುಧವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 91ರ ಇಳಿವಯಸ್ಸಿನಲ್ಲೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸದನಕ್ಕೆ ಹಾಜರಾಗಿದ್ದ ಅವರು, ಕರ್ನಾಟಕದ ಜಲ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. “ನಾನು ನನ್ನ ಜೀವನದ ಸಂಧ್ಯಾಕಾಲದಲ್ಲಿದ್ದೇನೆ. ಕರ್ನಾಟಕದ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ದಯವಿಟ್ಟು ಬಾಕಿ ಉಳಿದಿರುವ ನೀರಾವರಿ ಯೋಜನೆಗಳಿಗೆ ಶೀಘ್ರವೇ ಅನುಮೋದನೆ ನೀಡಿ,” ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರು ಮತ್ತು ಕಾವೇರಿ ಕಣಿವೆ ಸಂಕಷ್ಟ:
ಪ್ರಮುಖವಾಗಿ ಬೆಂಗಳೂರು ನಗರದ ಕುಡಿಯುವ ನೀರಿನ ಹಾಹಾಕಾರವನ್ನು ಅವರು ಸದನದ ಗಮನಕ್ಕೆ ತಂದರು. ಮೇಕೆದಾಟು ಯೋಜನೆ (Mekedatu Project) ಜಾರಿಯಾದರೆ ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುತ್ತದೆ. ಆದರೆ, ನೆರೆಯ ತಮಿಳುನಾಡು ಸರ್ಕಾರ ಇದಕ್ಕೆ ಅಡ್ಡಿಪಡಿಸುತ್ತಿದೆ. ಕೇಂದ್ರ ಜಲ ಆಯೋಗ ಮತ್ತು ಪರಿಸರ ಇಲಾಖೆಯಿಂದ ಅಗತ್ಯವಿರುವ ಅನುಮತಿಗಳು ಸಿಗದೇ ಯೋಜನೆಗಳು ವಿಳಂಬವಾಗುತ್ತಿವೆ. ಇದರಿಂದ ಕಾವೇರಿ ಕಣಿವೆಯ ರೈತರು ಮತ್ತು ಬೆಂಗಳೂರಿನ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ | ಟಿ20 ವಿಶ್ವಕಪ್: ಭಾರತದ ವಿರುದ್ಧದ ಪಂದ್ಯಕ್ಕೆ ಪಾಕ್ ಬಹಿಷ್ಕಾರ – ಶೆಹಬಾಝ್ ಷರೀಫ್ ಅಧಿಕೃತ ಘೋಷಣೆ!
ಕೈಮುಗಿದು ಕೇಳಿಕೊಂಡ ಮಾಜಿ ಪ್ರಧಾನಿ:
ಮಾತಿನ ಮಧ್ಯೆ ಭಾವುಕರಾದ ದೇವೇಗೌಡರು, “ರಾಜ್ಯದ ಅನೇಕ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಮಹದಾಯಿ ಇರಬಹುದು ಅಥವಾ ಮೇಕೆದಾಟು ಇರಬಹುದು, ಈ ಯೋಜನೆಗಳಿಗೆ ಹಸಿರು ನಿಶಾನೆ ಸಿಗಬೇಕಿದೆ. ರಾಜಕೀಯ ಬದಿಗಿಟ್ಟು ಮಾನವೀಯ ದೃಷ್ಟಿಯಿಂದ ಈ ಸಮಸ್ಯೆಯನ್ನು ನೋಡಿ. ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ, ದಯಮಾಡಿ ಈ ಯೋಜನೆಗಳಿಗೆ ಕ್ಲಿಯರೆನ್ಸ್ ಕೊಡಿ,” ಎಂದರು. ಒಬ್ಬ ಮಾಜಿ ಪ್ರಧಾನಿ, ರಾಜ್ಯದ ಹಿತಕ್ಕಾಗಿ ಹೀಗೆ ಕೈಮುಗಿದು ಕೇಳಿಕೊಂಡಿದ್ದು ಸದನದಲ್ಲಿನ ಸದಸ್ಯರನ್ನು ಮೂಕವಿಸ್ಮಿತರನ್ನಾಗಿಸಿತು.
ಕೇಂದ್ರ ಜಲಶಕ್ತಿ ಸಚಿವಾಲಯವು ಕರ್ನಾಟಕದ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಮತ್ತು ಅಂತಾರಾಜ್ಯ ಜಲ ವಿವಾದಗಳನ್ನು ಸೌಹಾರದಯುತವಾಗಿ ಬಗೆಹರಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
