ನವದೆಹಲಿ: ಸಂಸತ್ತಿನ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಾಡಿದ ಭಾಷಣ ಕೇವಲ ರಾಜಕೀಯ ವಿರೋಧಿಗಳಿಗೆ ನೀಡಿದ ಉತ್ತರವಷ್ಟೇ ಆಗಿರಲಿಲ್ಲ, ಬದಲಾಗಿ ಅದು ಅಂತರರಾಷ್ಟ್ರೀಯ ಸಮುದಾಯಕ್ಕೆ ರವಾನಿಸಿದ ಪ್ರಬಲ ಸಂದೇಶವಾಗಿತ್ತು. “ಭಾರತ ಇಂದು ಜಗತ್ತಿನ ಯಾವುದೇ ದೇಶದೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬಲ್ಲದು, ಸ್ಪರ್ಧಿಸಬಲ್ಲದು,” ಎಂದು ಹೇಳುವ ಮೂಲಕ ಮೋದಿ, ನವ ಭಾರತದ (New India) ತಾಕತ್ತನ್ನು ಜಗಜ್ಜಾಹೀರು ಮಾಡಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸುತ್ತಾ ಮಾತನಾಡಿದ ಪ್ರಧಾನಿ, ಭಾರತದ ಹೆಚ್ಚುತ್ತಿರುವ ಜಾಗತಿಕ ಪ್ರಭಾವವನ್ನು (Global Influence) ಎತ್ತಿ ಹಿಡಿದರು. “ಒಂದು ಕಾಲದಲ್ಲಿ ಭಾರತ ಜಗತ್ತಿನ ಸಹಾಯಕ್ಕಾಗಿ ಕಾಯುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸಂಕಷ್ಟದ ಸಮಯದಲ್ಲಿ ಜಗತ್ತು ಭಾರತದ ಕಡೆಗೆ ಭರವಸೆಯ ದೃಷ್ಟಿಯಿಂದ ನೋಡುತ್ತಿದೆ (Looks Up to Bharat). ಕೋವಿಡ್ ಲಸಿಕೆಯಿಂದ ಹಿಡಿದು ಡಿಜಿಟಲ್ ಪಾವತಿ ವ್ಯವಸ್ಥೆಯವರೆಗೆ (UPI), ಭಾರತ ಜಗತ್ತಿಗೆ ಪರಿಹಾರಗಳನ್ನು ನೀಡುವ ‘ವಿಶ್ವಮಿತ್ರ’ನಾಗಿ ಬೆಳೆದಿದೆ,” ಎಂದು ಮೋದಿ ಹೆಮ್ಮೆಯಿಂದ ನುಡಿದರು.
ಹೊಸ ವಿಶ್ವ ವ್ಯವಸ್ಥೆಯ ಸೃಷ್ಟಿಕರ್ತ:
“ಭಾರತ ಈಗ ಕೇವಲ ನಿಯಮಗಳನ್ನು ಪಾಲಿಸುವ ದೇಶವಲ್ಲ, ಬದಲಾಗಿ ಹೊಸ ವಿಶ್ವ ವ್ಯವಸ್ಥೆಯನ್ನು (New World Order) ರೂಪಿಸುವ ಶಕ್ತಿಯಾಗಿದೆ,” ಎಂದು ಮೋದಿ ಖಡಕ್ ಸಂದೇಶ ನೀಡಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ಭಾರತ ಇಂದು ನೇರಾ ನೇರ ಸ್ಪರ್ಧೆ (Competition) ಮಾಡುತ್ತಿದೆ. ಆರ್ಥಿಕತೆಯಲ್ಲಿ ನಾವು ಅಗ್ರ 3 ದೇಶಗಳ ಪಟ್ಟಿಗೆ ಸೇರುವತ್ತ ದಾಪುಗಾಲು ಹಾಕುತ್ತಿದ್ದೇವೆ. ರಕ್ಷಣಾ ವಲಯದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ನಾವು, ಇಂದು ಬ್ರಹ್ಮೋಸ್ ನಂತಹ ಕ್ಷಿಪಣಿಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ಇದು ನಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ | ಪ್ರಧಾನಿ ಉತ್ತರವೇ ಇಲ್ಲದೇ ರಾಷ್ಟ್ರಪತಿ ಭಾಷಣಕ್ಕೆ ಅಂಗೀಕಾರ: 21 ವರ್ಷದ ಬಳಿಕ ಮತ್ತೆ ಮುರಿದ ಸಂಪ್ರದಾಯ
ವಿರೋಧಿಗಳಿಗೆ ಟಾಂಗ್:
ಭಾರತದ ಪ್ರಗತಿಯನ್ನು ಸಹಿಸದ ಕೆಲವು ಶಕ್ತಿಗಳು ದೇಶದ ವರ್ಚಸ್ಸನ್ನು ಕುಗ್ಗಿಸಲು ಪ್ರಯತ್ನಿಸುತ್ತಿವೆ. ಆದರೆ ಭಾರತದ ಅಡಿಪಾಯ ಭದ್ರವಾಗಿದೆ. ನಮ್ಮ ಯುವಶಕ್ತಿ ಮತ್ತು ತಂತ್ರಜ್ಞಾನದ ಮೇಲಿನ ಹಿಡಿತ ನಮ್ಮನ್ನು ಯಾರೂ ತಡೆಯಲಾರದಂತಹ ಸ್ಥಾನಕ್ಕೆ ಕೊಂಡೊಯ್ದಿದೆ. “ನಮ್ಮದು ಬಲಿಷ್ಠ ಭಾರತ, ಯಾರ ಮುಂದೆಯೂ ತಲೆಬಾಗದ ಭಾರತ,” ಎಂದು ಹೇಳುವ ಮೂಲಕ ಮೋದಿ, ದೇಶದ ಸಾರ್ವಭೌಮತ್ವದ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಿದರು.
