ಜಲಂಧರ್: ಪಂಜಾಬ್ನ ಜಲಂಧರ್ನಲ್ಲಿ ಇಂದು (ಫೆಬ್ರವರಿ 6, ಶುಕ್ರವಾರ) ಬೆಳ್ಳಂಬೆಳಿಗ್ಗೆ ಆಮ್ ಆದ್ಮಿ ಪಕ್ಷದ ಪ್ರಭಾವಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶವಾದ ಮಾಡೆಲ್ ಟೌನ್ನಲ್ಲಿರುವ ಗುರುದ್ವಾರದ ಬಳಿ ಈ ಭೀಕರ ಘಟನೆ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಲಕ್ಕಿ ಒಬೆರಾಯ್ ಅವರು ಎಂದಿನಂತೆ ಗುರುದ್ವಾರಕ್ಕೆ ಪ್ರಾರ್ಥನೆ ಸಲ್ಲಿಸಲು ತಮ್ಮ ‘ಮಹೀಂದ್ರಾ ಥಾರ್’ ಜೀಪಿನಲ್ಲಿ ಆಗಮಿಸಿದ್ದರು. ಬೆಳಿಗ್ಗೆ ಸುಮಾರು 7:55 ರಿಂದ 8:00 ಗಂಟೆಯ ಸುಮಾರಿಗೆ ಅವರು ಗುರುದ್ವಾರದಿಂದ ಹೊರಬಂದು ತಮ್ಮ ವಾಹನದಲ್ಲಿ ಕುಳಿತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ರಾಜಕೀಯ ಹಿನ್ನೆಲೆ ಮತ್ತು ತನಿಖೆ:
ಹಣಕಾಸು ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದ ಲಕ್ಕಿ ಒಬೆರಾಯ್, ಜಲಂಧರ್ ಕ್ಯಾಂಟ್ ಕ್ಷೇತ್ರದ ಆಪ್ ಉಸ್ತುವಾರಿ ರಾಜವಿಂದರ್ ಥಿಯಾರಾ ಅವರಿಗೆ ಆಪ್ತರಾಗಿದ್ದರು. ಅವರ ಪತ್ನಿ ಸಿಮರ್ಜೋತ್ ಕೌರ್ ಅವರು ಕಳೆದ ವರ್ಷ ನಡೆದ ಪಾಲಿಕೆ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸ್ ಕಮಿಷನರ್ ನೇತೃತ್ವದ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ. ಇದು ವ್ಯವಸ್ಥಿತವಾಗಿ ನಡೆದ ಹತ್ಯೆಯಾಗಿದ್ದು, ಹಳೆಯ ದ್ವೇಷ ಅಥವಾ ಗ್ಯಾಂಗ್ಸ್ಟರ್ಗಳ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಪಕ್ಷದ ನಾಯಕನೇ ಹಾಡಹಗಲೇ ಹತ್ಯೆಯಾಗಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಪಂಜಾಬ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆಡಳಿತ ಪಕ್ಷದ ನಾಯಕರಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರ ಕಥೆ ಏನು?” ಎಂದು ಪ್ರಶ್ನಿಸಿದ್ದಾರೆ.
