ಬಳ್ಳಾರಿ: ಗಣಿ ನಾಡು ಬಳ್ಳಾರಿಯ ಆಂಜನೇಯ ದೇವಸ್ಥಾನವೊಂದರ ಆವರಣದಲ್ಲಿ ಮಾಂಸದ ತುಣುಕುಗಳು ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಿಡಿಗೇಡಿಗಳ ಕೃತ್ಯವೇ ಅಥವಾ ಪ್ರಾಣಿಗಳ ಮೂಲಕ ನಡೆದ ಆಕಸ್ಮಿಕವೇ ಎಂಬ ಚರ್ಚೆಗಳು ಜಿಲ್ಲೆಯಾದ್ಯಂತ ಆರಂಭವಾಗಿವೆ.
ದೇವಸ್ಥಾನದ ಆವರಣದಲ್ಲಿ ಮಾಂಸದ ತ್ಯಾಜ್ಯ ಕಂಡುಬರುತ್ತಿದ್ದಂತೆಯೇ ಸ್ಥಳೀಯರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಇತ್ತೀಚೆಗಷ್ಟೇ ದೇವಸ್ಥಾನದ ಸಮೀಪದಲ್ಲಿ ‘ಪಿಸ್ತಾ ಹೌಸ್’ ಎಂಬ ಮಾಂಸಾಹಾರಿ ಹೋಟೆಲ್ ಪ್ರಾರಂಭವಾಗಿದ್ದು, ಅಲ್ಲಿಂದಲೇ ಬೀದಿನಾಯಿಗಳು ಮಾಂಸದ ತುಣುಕುಗಳನ್ನು ಎಳೆದುಕೊಂಡು ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಹಿಂದೂ ಸಂಘಟನೆಗಳು ಇದನ್ನು ಒಪ್ಪುತ್ತಿಲ್ಲ.
ಕಿಡಿಗೇಡಿಗಳ ಕೃತ್ಯವೆಂದ ಬಿಜೆಪಿ:
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಇದು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಆರೋಪಿಸಿದ್ದಾರೆ. ಅರ್ಚಕರ ಮೂಲಕ ಅಧಿಕೃತವಾಗಿ ದೂರು ನೀಡಲು ನಿರ್ಧರಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪಾರದರ್ಶಕ ತನಿಖೆ ನಡೆಸುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
“ನಮ್ಮ ಏರಿಯಾದ ದೇವಸ್ಥಾನವನ್ನು ನಾವೇ ನೋಡಿಕೊಳ್ಳುತ್ತೇವೆ, ಹೊರಗಿನವರ ಹಸ್ತಕ್ಷೇಪ ಬೇಡ” ಎಂದು ಕೆಲವು ಸ್ಥಳೀಯರು ಹೇಳುತ್ತಿರುವುದು ಘಟನೆಯ ಸುತ್ತ ಮತ್ತಷ್ಟು ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ.
