ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೂರಾರು ಕಾಗೆಗಳು ದಿಢೀರ್ ಸಾವನ್ನಪ್ಪುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಭೋಪಾಲ್ನ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆ (NIHSAD) ನಡೆಸಿದ ಪರೀಕ್ಷೆಯಲ್ಲಿ ಸತ್ತ ಕಾಗೆಗಳಲ್ಲಿ ರೋಗಕಾರಕ H5N1 ವೈರಸ್ (ಹಕ್ಕಿ ಜ್ವರ) ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಜಿಲ್ಲೆಗಳಲ್ಲಿ ತೀವ್ರ ನಿಗಾ ವಹಿಸಿದೆ.
ಕಳೆದ ಕೆಲವು ದಿನಗಳಿಂದ ಚೆನ್ನೈನ ಅಡ್ಯಾರ್, ಗಾಂಧಿನಗರ, ವೇಲಚೇರಿ ಮತ್ತು ಪಳ್ಳಿಕರಣೈ ಭಾಗಗಳಲ್ಲಿ ಅಂದಾಜು 1,500ಕ್ಕೂ ಹೆಚ್ಚು ಕಾಗೆಗಳು ಸತ್ತು ಬಿದ್ದಿವೆ. ಈ ಅಸಹಜ ಸಾವಿನ ಬೆನ್ನಲ್ಲೇ ಎಚ್ಚೆತ್ತ ತಮಿಳುನಾಡು ಪಶುಸಂಗೋಪನಾ ಇಲಾಖೆ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿತ್ತು. ಪರೀಕ್ಷಾ ವರದಿಯಲ್ಲಿ ‘ಏವಿಯನ್ ಇನ್ಪ್ಲುಯೆನ್ಸ’ ಪತ್ತೆಯಾಗಿದ್ದು, ಕೇಂದ್ರ ಸರ್ಕಾರವು ಕೂಡಲೇ ರಾಜ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಕರ್ನಾಟಕಕ್ಕೆ ಆತಂಕವೇಕೆ?
ತಮಿಳುನಾಡಿನೊಂದಿಗೆ ಕರ್ನಾಟಕವು ಸುದೀರ್ಘವಾದ ಗಡಿ ಹಂಚಿಕೊಂಡಿದ್ದು, ಕೋಳಿ ಮತ್ತು ಮೊಟ್ಟೆಗಳ ಸಾಗಾಣಿಕೆ ನಿರಂತರವಾಗಿ ನಡೆಯುತ್ತದೆ. ಮುಖ್ಯವಾಗಿ ಬೆಂಗಳೂರು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಿಗೆ ಈ ಸೋಂಕು ಹರಡುವ ಭೀತಿ ಎದುರಾಗಿದೆ. ಈಗಾಗಲೇ ಕರ್ನಾಟಕ ಪಶುಸಂಗೋಪನಾ ಇಲಾಖೆಯು ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ತಮಿಳುನಾಡಿನಿಂದ ಬರುವ ವಾಹನಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಆದೇಶಿಸಿದೆ.
ಇದನ್ನೂ ಓದಿ | ಆಂಜನೇಯ ದೇವಸ್ಥಾನದಲ್ಲಿ ಮಾಂಸದ ತುಣುಕು ಪತ್ತೆ; ಭುಗಿಲೆದ್ದ ಆಕ್ರೋಶ!
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ:
- ಪಕ್ಷಿಗಳ ಸಂಪರ್ಕ ಬೇಡ: ಸತ್ತ ಕಾಗೆಗಳು ಅಥವಾ ಇತರ ಹಕ್ಕಿಗಳನ್ನು ಬರಿಗೈಯಿಂದ ಮುಟ್ಟಬೇಡಿ.
- ಸ್ವಚ್ಛತೆ ಇರಲಿ: ಕೋಳಿ ಫಾರಂಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಧರಿಸಬೇಕು.
- ಚೆನ್ನಾಗಿ ಬೇಯಿಸಿದ ಮಾಂಸ: ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 74 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನದಲ್ಲಿ ಚೆನ್ನಾಗಿ ಬೇಯಿಸಿ ಸೇವಿಸುವುದು ಸುರಕ್ಷಿತ.
- ಲಕ್ಷಣಗಳಿದ್ದರೆ ಗಮನಿಸಿ: ತೀವ್ರ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
