ಬೆಂಗಳೂರು: “ಈ ಸಲ ಕಪ್ ನಮ್ದೇ” ಎನ್ನುತ್ತಿದ್ದ ಅಭಿಮಾನಿಗಳ ಕನಸು ಈಗ ನನಸಾಗಿದೆ, ಅಷ್ಟೇ ಅಲ್ಲದೆ ಬೆಂಗಳೂರು ತಂಡ ಈಗ ಸತತ ಮೂರು ವರ್ಷಗಳಿಂದ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ.
ಹದಿನೇಳು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಪುರುಷರ ತಂಡ ಕಳೆದ ವರ್ಷ ಚಾಂಪಿಯನ್ ಆಗಿದ್ದರೆ, ಮಹಿಳಾ ತಂಡವು ಕೇವಲ ನಾಲ್ಕು ಆವೃತ್ತಿಗಳಲ್ಲಿ ಎರಡು ಬಾರಿ ಕಪ್ ಗೆದ್ದು ‘ಹೆಣ್ಣುಮಕ್ಕಳೇ ಸ್ಟ್ರಾಂಗು’ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಆರ್ಸಿಬಿ ಇತಿಹಾಸದಲ್ಲಿ ಮೊದಲ ಬಾರಿಗೆ ಚಿನ್ನದ ಟ್ರೋಫಿ ತಂದುಕೊಟ್ಟಿದ್ದು ಸ್ಮೃತಿ ಮಂಧಾನ ನೇತೃತ್ವದ ಮಹಿಳಾ ತಂಡ. 2024ರ ಡಬ್ಲ್ಯೂಪಿಎಲ್ ಫೈನಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಆರ್ಸಿಬಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದು ಫ್ರಾಂಚೈಸಿಯ 16 ವರ್ಷಗಳ ಬರವನ್ನು ನೀಗಿಸಿದ ಐತಿಹಾಸಿಕ ಕ್ಷಣವಾಗಿತ್ತು.
2025: ಪುರುಷರ ತಂಡದ 18 ವರ್ಷಗಳ ಕನಸು ನನಸು
17 ವರ್ಷಗಳ ಕಾಲ ಟ್ರೋಫಿಗಾಗಿ ಸೆಣಸಾಡಿದ್ದ ಆರ್ಸಿಬಿ ಪುರುಷರ ತಂಡ, ತನ್ನ 18ನೇ ಆವೃತ್ತಿಯಲ್ಲಿ (2025) ಅಸಾಧಾರಣ ಪ್ರದರ್ಶನ ನೀಡಿತು. ರಜತ್ ಪಾಟಿದಾರ್ ನಾಯಕತ್ವದಲ್ಲಿ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು, ಕೋಟ್ಯಂತರ ಅಭಿಮಾನಿಗಳ ಕಣ್ಣಲ್ಲಿ ಆನಂದಬಾಷ್ಪ ತರಿಸಿತು.
ಇದನ್ನೂಓದಿ | ಸತತ 2ನೇ ಬಾರಿ ಡೆಲ್ಲಿ ಮಣಿಸಿ ಕಪ್ ಎತ್ತಿಹಿಡಿದ ಆರ್ಸಿಬಿ
2026: ಮಹಿಳಾ ತಂಡದ ಎರಡನೇ ಟ್ರೋಫಿ ಮತ್ತು ಹ್ಯಾಟ್ರಿಕ್
ಇದೀಗ 2026ರ ಡಬ್ಲ್ಯೂಪಿಎಲ್ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ಪಡೆ ಮತ್ತೆ ಅಬ್ಬರಿಸಿದೆ. ವಡೋದರಾದಲ್ಲಿ ನಡೆದ ರೋಚಕ ಫೈನಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ನೀಡಿದ್ದ 204 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ, ದಾಖಲೆಯ ಜಯ ಸಾಧಿಸಿತು. ಸ್ಮೃತಿ ಮಂಧಾನ (87) ಮತ್ತು ಜಾರ್ಜಿಯಾ ವೋಲ್ (79) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ತಂಡ 2ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಮೂಲಕ ಆರ್ಸಿಬಿ ಫ್ರಾಂಚೈಸಿ ಸತತ ಮೂರು ವರ್ಷಗಳಲ್ಲಿ (2024, 2025, 2026) ಮೂರು ಟ್ರೋಫಿಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ.
