ಕಲರ್ಸ್ ಕನ್ನಡ ವಾಹಿನಿಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ‘ಭಾರ್ಗವಿ LLB’ ಧಾರಾವಾಹಿ ಈಗ ರೋಚಕ ಘಟ್ಟ ತಲುಪಿದೆ. ವಿಶಿಷ್ಟ ಕಥಾಹಂದರದ ಮೂಲಕ ವೀಕ್ಷಕರ ಮನಗೆದ್ದಿರುವ ಈ ಸೀರಿಯಲ್, ಈಗ ಕಥೆಯ ದಿಕ್ಕನ್ನೇ ಬದಲಿಸುವ ಮಹತ್ವದ ತಿರುವಿನಲ್ಲಿದೆ. ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ವಕೀಲೆ ಭಾರ್ಗವಿಯ ಬದುಕಿನಲ್ಲಿ ವಿಧಿಯಾಟ ಭೀಕರ ಸಂಚಲನ ಮೂಡಿಸಿದ್ದು, ವೀಕ್ಷಕರಲ್ಲಿ ಹತ್ತಾರು ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಭಾವಿ ವಕೀಲ ಜೆ.ಪಿ. ಪಾಟೀಲ್ನಿಂದಾಗಿ ವಕೀಲಿಕೆ ತ್ಯಜಿಸಿದ್ದ ತನ್ನ ತಂದೆ ರವೀಂದ್ರ ಭಟ್ಕಳ್ನನ್ನು ಮತ್ತೆ ಅದೇ ಕೋರ್ಟ್ಗೆ ಕರೆತರುವ ದಿಟ್ಟ ಗುರಿ ಭಾರ್ಗವಿಯದ್ದಾಗಿತ್ತು. ಅಂದುಕೊಂಡಂತೆ ಆ ಕನಸನ್ನೂ ಅವಳು ಸಾಕಾರ ಮಾಡಿಕೊಂಡಿದ್ದಳು. ಆದರೆ, ಆ ದೊಡ್ಡ ಗೆಲುವನ್ನು ಸಂಭ್ರಮಿಸಲು ಇಂದು ಅವಳ ಜೊತೆಗೆ ಅಪ್ಪನೇ ಇಲ್ಲ! ಇದು ಅವಳ ಸಾಧನೆಗೆ ಸಂದ ಸೋಲೋ ಅಥವಾ ವಿಧಿಯಾಟವೋ ಎಂಬ ನೋವು ಅವಳನ್ನು ಆವರಿಸಿದೆ.
ಇದುವರೆಗೆ ಧೈರ್ಯದ ಸಂಕೇತವಾಗಿದ್ದ ಭಾರ್ಗವಿಗೆ ಈಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ತಂದೆ ರವೀಂದ್ರ ಭಟ್ಕಳ್ ಸಂಭವಿಸಿದ ಅಕಾಲಿಕ ಸಾವು ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ಸಾವು ಕೇವಲ ಆಕಸ್ಮಿಕ ಅಪಘಾತವೋ ಅಥವಾ ಭಾರ್ಗವಿಯ ವೃತ್ತಿ ವೈರಿಗಳು ನಡೆಸಿದ ಸುಪ್ತ ಸಂಚೋ ಎಂಬ ಸಂಶಯ ಈಗ ವೀಕ್ಷಕರಲ್ಲಿ ಮನೆಮಾಡಿದೆ.
ಭಾರ್ಗವಿಯ ಭೀಷ್ಮ ಪ್ರತಿಜ್ಞೆ
ತಂದೆಯ ಸಾವಿನಿಂದ ಕಂಗಾಲಾಗಿರುವ ತಾಯಿ, ಪತಿಯ ಸಾವಿಗೆ ಕಾರಣವಾದ ಈ ವಕೀಲಿ ವೃತ್ತಿಯನ್ನೇ ಬಿಡುವಂತೆ ಭಾರ್ಗವಿಗೆ ತಾಕೀತು ಮಾಡಿದ್ದಾರೆ. ತಾಯಿಯ ನೋವಿಗೆ ಸ್ಪಂದಿಸಿದ ಭಾರ್ಗವಿ, ಅಪ್ಪನ ಚಿತೆಯ ಮುಂದೆಯೇ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. “ಅಮ್ಮನೇ ಹೇಳುವವರೆಗೂ ವಕೀಲಿಕೆಯ ಕೋಟ್ ಧರಿಸುವುದಿಲ್ಲ” ಎಂದು ಶಪಥ ಮಾಡುವ ಮೂಲಕ ತನ್ನ ವೃತ್ತಿಜೀವನಕ್ಕೆ ತಾತ್ಕಾಲಿಕ ಅಂತ್ಯ ಹಾಡಲು ಮುಂದಾಗಿದ್ದಾಳೆ.
ಲಾಯರ್ ಕೋಟ್ ಕಳಚಿಟ್ಟ ಭಾರ್ಗವಿ ಮುಂದೆ ಏನು ಮಾಡಲಿದ್ದಾಳೆ? ಸಾಮಾನ್ಯ ಯುವತಿಯಾಗಿ ಅವಳ ಬದುಕು ಹೇಗಿರಲಿದೆ? ರವೀಂದ್ರ ಭಟ್ಕಳರ ಸಾವು ಪೂರ್ವನಿಯೋಜಿತ ಕೊಲೆಯಾಗಿದ್ದರೆ, ಅದರ ಹಿಂದಿರುವ ಅಸಲಿ ಮುಖವಾಡಗಳು ಯಾರು? ಕೋರ್ಟ್ ಮೆಟ್ಟಿಲೇರದೇ ಭಾರ್ಗವಿ ತನ್ನ ತಂದೆಯ ಸಾವಿಗೆ ನ್ಯಾಯ ಒದಗಿಸಲು ಸಾಧ್ಯವೇ? ಈ ಎಲ್ಲಾ ತಿರುವುಗಳನ್ನು ನೋಡಿದರೆ, ಕಥೆ ಇಲ್ಲಿಗೆ ಮುಗಿಯಿತೇ ಅಥವಾ ಇದು ಹೊಸ ಅಧ್ಯಾಯದ ಆರಂಭವೇ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ | ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಧಾರ್ಮಿಕ ಸಂಕಷ್ಟ!
ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಭಾರ್ಗವಿಯ ಹೊಸ ಅವತಾರ ಮತ್ತು ಕಥೆಯ ಈ ಅನಿರೀಕ್ಷಿತ ಪಯಣ ವೀಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ‘ಭಾರ್ಗವಿ LLB’ ಸೋಮವಾರದಿಂದ ಶುಕ್ರವಾರದವರೆಗೆ ಬದಲಾದ ಸಮಯದಲ್ಲಿ ರಾತ್ರಿ 9:30ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
