ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ ಮೊದಲ ವಾರ ಬಜೆಟ್ ಮಂಡನೆಯಾಗಲಿದ್ದು, ಅದರ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿರುವಾಗಲೇ ಕಾಂಗ್ರೆಸ್ನ 25ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 16ರಿಂದ ಮಾರ್ಚ್ 3ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಶಾಸಕರ ತಂಡ ಸಜ್ಜಾಗಿದ್ದು, ಇದು ಹೈಕಮಾಂಡ್ ಹಂತದಲ್ಲೂ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.
ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ನೇತೃತ್ವದಲ್ಲಿ ಈ ಪ್ರವಾಸ ಆಯೋಜನೆಯಾಗಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ನಲ್ಲಿನ ಆಧುನಿಕ ಪಶುಸಂಗೋಪನೆ, ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ಪದ್ಧತಿಗಳ ಬಗ್ಗೆ ಅಧ್ಯಯನ ನಡೆಸುವುದು ಇದರ ಅಧಿಕೃತ ಉದ್ದೇಶ ಎಂದು ಹೇಳಲಾಗಿದೆ. ಆದರೆ, ಬಜೆಟ್ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಶಾಸಕರು ವಿದೇಶಕ್ಕೆ ತೆರಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಪ್ರತಿಕ್ರಿಯೆ:
ಈ ಪ್ರವಾಸದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅವರ ವೈಯಕ್ತಿಕ ಪ್ರವಾಸಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ,” ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ಪ್ರವಾಸದ ಬಗ್ಗೆ ತಮಗೆ ಮುಂಚಿತವಾಗಿ ಮಾಹಿತಿ ಇಲ್ಲ ಎಂದು ಅವರು ಹೇಳಿರುವುದು ಕುತೂಹಲ ಮೂಡಿಸಿದೆ. ಇತ್ತ, ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಹೈಕಮಾಂಡ್ ಈ ಪ್ರವಾಸದ ಬಗ್ಗೆ ರಾಜ್ಯ ನಾಯಕರಿಂದ ವರದಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಹಸೀನಾ ಯುಗಾಂತ್ಯದ ನಂತರ ಬಾಂಗ್ಲಾದೇಶದಲ್ಲಿ ಚೊಚ್ಚಲ ಚುನಾವಣೆ: ಮತದಾನ ಆರಂಭ
ವಿದೇಶಕ್ಕೆ ತೆರಳುತ್ತಿರುವ ಶಾಸಕರಲ್ಲಿ ಹೆಚ್ಚಿನವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣಕ್ಕೆ ಸೇರಿದವರು ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ಈ ‘ಪ್ರವಾಸ ರಾಜಕೀಯ’ ಹೊಸ ತಿರುವು ಪಡೆದಿದೆ.
