ನವದೆಹಲಿ: ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವಂತೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ದೆಹಲಿಯ 10 ಜನಪಥ್ ನಿವಾಸದಲ್ಲಿ ಸುಮಾರು 30 ನಿಮಿಷಗಳ ಕಾಲ ನಡೆದ ಈ ಭೇಟಿ ಕೇವಲ ‘ಅಸ್ಸಾಂ ಚುನಾವಣೆ’ಗೆ ಸೀಮಿತವಾಗಿತ್ತೇ ಅಥವಾ ಸಿಎಂ ಕುರ್ಚಿ ಹಂಚಿಕೆಯ ಬಗ್ಗೆಯೂ ಚರ್ಚೆ ನಡೆದಿದೆಯೇ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಸೋನಿಯಾ ಗಾಂಧಿ ನಿವಾಸದಿಂದ ಹೊರಬಂದ ಶಿವಕುಮಾರ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಭೇಟಿಯ ಉದ್ದೇಶದ ಬಗ್ಗೆ ಪ್ರಶ್ನಿಸಿದಾಗ, ಅವರು ತಮ್ಮದೇ ಶೈಲಿಯಲ್ಲಿ. “ನಾನು ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು. ಇಲ್ಲಿನ ಗಾಳಿ ಕುಡಿದು ಸುಮ್ಮನೆ ವಾಪಸ್ ಹೋಗಲು ಬಂದಿಲ್ಲ. ಹೈಕಮಾಂಡ್ ನಾಯಕರೊಂದಿಗೆ ಮಾತನಾಡಬೇಕಾದ್ದನ್ನು ಮಾತನಾಡಿದ್ದೇನೆ,” ಎಂದು ಮಾರ್ಮಿಕವಾಗಿ ಹೇಳಿದರು. ಈ ಹೇಳಿಕೆಯು ಅವರು ಸಿಎಂ ಪಟ್ಟಕ್ಕಾಗಿ ಬಿಗಿಪಟ್ಟು ಹಿಡಿದಿರುವುದರ ಪರೋಕ್ಷ ಸೂಚನೆ ಎನ್ನಲಾಗುತ್ತಿದೆ.
ಅಸ್ಸಾಂ ಚುನಾವಣೆ ನೆಪವೋ?
ಅಧಿಕೃತವಾಗಿ ಈ ಭೇಟಿಯನ್ನು ಅಸ್ಸಾಂ ಅಸೆಂಬ್ಲಿ ಚುನಾವಣೆಯ ಸಿದ್ಧತೆಗಳ ಬಗ್ಗೆ ಎಂದು ಬಿಂಬಿಸಲಾಗಿದೆ. ಅಸ್ಸಾಂನ ಕೆಲವು ಕಾಂಗ್ರೆಸ್ ನಾಯಕರೊಂದಿಗೆ ಬಂದಿದ್ದ ಡಿಕೆಶಿ, ಆ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ರಾಜ್ಯದಲ್ಲಿ ಬಜೆಟ್ ಪೂರ್ವಭಾವಿ ಸಭೆಗಳನ್ನೂ ಕೈಬಿಟ್ಟು ಅವರು ದೆಹಲಿಗೆ ದೌಡಾಯಿಸಿರುವುದು ಕೇವಲ ಹೊರ ರಾಜ್ಯದ ಚುನಾವಣೆಗಾಗಿ ಎನ್ನುವುದನ್ನು ರಾಜಕೀಯ ವಿಶ್ಲೇಷಕರು ಒಪ್ಪುತ್ತಿಲ್ಲ.
ಇದನ್ನೂ ಓದಿ | ಬಜೆಟ್ ಹೊಸ್ತಿಲಲ್ಲಿ ‘ಕೈ’ ಶಾಸಕರ ಫಾರಿನ್ ಟ್ರಿಪ್: ಹೈಕಮಾಂಡ್ ಕೆಂಗಣ್ಣು!
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕಿಚ್ಚು:
ರಾಜ್ಯ ಕಾಂಗ್ರೆಸ್ ಸರ್ಕಾರವು ಎರಡೂವರೆ ವರ್ಷಗಳ ಅವಧಿಯನ್ನು ಸಮೀಪಿಸುತ್ತಿದ್ದಂತೆ (ನವೆಂಬರ್ 2025ರ ನಂತರ), ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ‘ಅಧಿಕಾರ ಹಂಚಿಕೆ’ ಒಪ್ಪಂದದ ಬಗ್ಗೆ ಬಹಿರಂಗವಾಗಿ ಮಾತಿನ ಚಕಮಕಿ ನಡೆಯುತ್ತಿದೆ. ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಡಿಕೆಶಿ ಆಪ್ತರು ಅವರಿಗೆ ಸಿಎಂ ಪಟ್ಟ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಹೈಕಮಾಂಡ್ ನಾಯಕರು ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು ಎಂದು ಎಚ್ಚರಿಕೆ ನೀಡಿದ್ದರೂ, ದೆಹಲಿ ಭೇಟಿಯ ಮೂಲಕ ಶಿವಕುಮಾರ್ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಬಲವಾಗಿ ಮಂಡಿಸಿದ್ದಾರೆ ಎನ್ನಲಾಗಿದೆ.
