ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಮತ್ತು ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಇಂದು ಮಹತ್ವದ ಸುದ್ದಿ ಸಿಗುವ ಸಾಧ್ಯತೆಯಿದೆ. ಮುಂಬರುವ ಐಪಿಎಲ್ ಸರಣಿಯ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ನಡೆಸುವ ಕುರಿತು ಮತ್ತು ಕ್ರೀಡಾಂಗಣದ ಭದ್ರತಾ ವ್ಯವಸ್ಥೆಗಳ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೆಎಸ್ಸಿಎ (KSCA) ಮತ್ತು ಆರ್ಸಿಬಿ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಕ್ರೀಡಾಂಗಣಗಳಲ್ಲಿನ ಭದ್ರತೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕುನ್ಹಾ ಅವರು ನೀಡಿದ್ದ ಶಿಫಾರಸುಗಳನ್ನು ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. “ಕುನ್ಹಾ ವರದಿ ಶಿಫಾರಸಿನಂತೆ ಈಗಾಗಲೇ ಕೆಲಸ ಆರಂಭವಾಗಿದ್ದು, ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸಲಾಗಿದೆ,” ಎಂದು ಪರಮೇಶ್ವರ್ ತಿಳಿಸಿದ್ದಾರೆ. ಪ್ರೇಕ್ಷಕರ ಸುರಕ್ಷತೆ ಮತ್ತು ಕ್ರೀಡಾಂಗಣದ ಮೂಲಸೌಕರ್ಯ ಅಭಿವೃದ್ಧಿಗೆ ಕೆಎಸ್ಸಿಎ ಒಪ್ಪಿಗೆ ನೀಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಉದ್ಘಾಟನಾ ಪಂದ್ಯಕ್ಕೆ ಹೆಚ್ಚಿದ ಬೇಡಿಕೆ:
ಕಳೆದ ವರ್ಷ ಆರ್ಸಿಬಿ ತಂಡವು ಚಾಂಪಿಯನ್ ಪಟ್ಟಕ್ಕೇರಿದ ಹಿನ್ನೆಲೆಯಲ್ಲಿ, ಈ ಬಾರಿ ಐಪಿಎಲ್ನ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ಆಯೋಜಿಸಬೇಕು ಎಂಬುದು ಫ್ರಾಂಚೈಸಿ ಮತ್ತು ಅಭಿಮಾನಿಗಳ ಆಸೆಯಾಗಿದೆ. ಈ ಕುರಿತು ಕೆಎಸ್ಸಿಎ ಸರ್ಕಾರಕ್ಕೆ ಅಧಿಕೃತ ಮನವಿ ಮಾಡಿದೆ. “ಬೆಂಗಳೂರು ತಂಡ ಕಳೆದ ಬಾರಿ ಚಾಂಪಿಯನ್ ಆಗಿದೆ, ಹಾಗಾಗಿ ಮೊದಲ ಪಂದ್ಯ ಇಲ್ಲಿಯೇ ನಡೆಯಬೇಕು ಎಂದು ಅವರು ಕೇಳಿದ್ದಾರೆ. ಈ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ (Cabinet) ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಗೃಹ ಸಚಿವರು ಇಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | ಆಳಂದ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಸುಪ್ರೀಂ ಕೋರ್ಟ್ ಅಸ್ತು!
ಮಹೇಶ್ವರ ರಾವ್ ಸಮಿತಿ ವರದಿ:
ಕ್ರೀಡಾಂಗಣದ ಸಿದ್ಧತೆ ಮತ್ತು ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಲು ಬಿಬಿಎಂಪಿ ಮಾಜಿ ಆಯುಕ್ತ ಮಹೇಶ್ವರ ರಾವ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಈಗಾಗಲೇ ವರದಿಯನ್ನು ಸಲ್ಲಿಸಿದ್ದು, ಇಂದು ಸಂಜೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಲಿದೆ. ಸರ್ಕಾರದ ಅನುಮತಿ ಸಿಕ್ಕರೆ, ಮಾರ್ಚ್ ಅಂತ್ಯದಲ್ಲಿ ಐಪಿಎಲ್ ಧಮಾಕಾ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ.
