ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಮುಗಿಸಿ ವರ್ಷಗಳೇ ಕಳೆದರೂ ಗುತ್ತಿಗೆದಾರರಿಗೆ ಬರಬೇಕಾದ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಒಟ್ಟು 37,000 ಕೋಟಿ ರೂಪಾಯಿ ಬಿಲ್ ಬಾಕಿಯಿದ್ದು, ಇದರಿಂದಾಗಿ ಸಾವಿರಾರು ಗುತ್ತಿಗೆದಾರರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಕೊಡಗು ಸಂತ್ರಸ್ತರ ಯೋಜನೆಯಲ್ಲೂ ವಂಚನೆ?
ಮಂಜುನಾಥ್ ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದು 2018ರ ಕೊಡಗಿನ ಪ್ರಾಕೃತಿಕ ವಿಕೋಪದ ಸಂದರ್ಭದ ಕಾಮಗಾರಿಗಳನ್ನು. ಅಂದು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಕೊಡಗಿನಲ್ಲಿ ತುರ್ತು ರಸ್ತೆ ದುರಸ್ತಿ, ಸೇತುವೆ ನಿರ್ಮಾಣ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಗುತ್ತಿಗೆದಾರರು ಹಗಲಿರುಳು ಶ್ರಮಿಸಿದ್ದರು. ಆದರೆ, ಈ ಕಾಮಗಾರಿಗಳ ಬಾಕಿ ಮೊತ್ತವಾದ 180 ಕೋಟಿ ರೂಪಾಯಿ ಕಳೆದ ಆರು ವರ್ಷಗಳಿಂದ ಪಾವತಿಯಾಗಿಲ್ಲ. ಮಾನವೀಯತೆಯ ದೃಷ್ಟಿಯಿಂದ ಕೆಲಸ ಮಾಡಿದ ಗುತ್ತಿಗೆದಾರರಿಗೆ ಸರ್ಕಾರ ಈಗ ಅನ್ಯಾಯ ಮಾಡುತ್ತಿದೆ ಎಂಬುದು ಸಂಘದ ಗಂಭೀರ ಆರೋಪವಾಗಿದೆ.
ಆರ್ಥಿಕ ಸಂಕಷ್ಟದಲ್ಲಿ ಗುತ್ತಿಗೆದಾರರು:
“ಗುತ್ತಿಗೆದಾರರು ಸಾಲ ಸೋಲ ಮಾಡಿ, ಆಸ್ತಿ ಅಡಮಾನವಿಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಅವರು ಬ್ಯಾಂಕ್ ಬಡ್ಡಿ ಕಟ್ಟಲಾಗದೆ ಕಂಗಾಲಾಗಿದ್ದಾರೆ. ಅನೇಕ ಗುತ್ತಿಗೆದಾರರು ಆತ್ಮಹತ್ಯೆಯ ಹಾದಿ ಹಿಡಿಯುವ ಆತಂಕವಿದೆ,” ಎಂದು ಮಂಜುನಾಥ್ ಎಚ್ಚರಿಸಿದ್ದಾರೆ. ಬಿಬಿಎಂಪಿ, ಲೋಕೋಪಯೋಗಿ ಇಲಾಖೆ (PWD), ಮತ್ತು ನೀರಾವರಿ ಇಲಾಖೆ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಹಣದ ಕೊರತೆ ನೆಪವೊಡ್ಡಿ ಬಿಲ್ ತಡೆಹಿಡಿಯಲಾಗಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ | ಆಳಂದ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಸುಪ್ರೀಂ ಕೋರ್ಟ್ ಅಸ್ತು!
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಹಂತ ಹಂತವಾಗಿ ಬಾಕಿ ಹಣವನ್ನು ಬಿಡುಗಡೆ ಮಾಡದಿದ್ದರೆ, ರಾಜ್ಯಾದ್ಯಂತ ಕೆಲಸಗಳನ್ನು ಸ್ಥಗಿತಗೊಳಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘವು ಎಚ್ಚರಿಕೆ ನೀಡಿದೆ. ಕೇವಲ ಭರವಸೆಗಳನ್ನು ನೀಡುವ ಬದಲು ಆರ್ಥಿಕ ಶಿಸ್ತು ಕಾಪಾಡಿ ಗುತ್ತಿಗೆದಾರರ ಬದುಕನ್ನು ಉಳಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ.
