ಕಲಬುರಗಿ/ನವದೆಹಲಿ: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವಿವಾದಿತ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸುವ ವಿಚಾರದಲ್ಲಿ ಹಿಂದೂ ಭಕ್ತರಿಗೆ ದೊಡ್ಡ ಜಯ ಸಿಕ್ಕಿದೆ. ಫೆಬ್ರವರಿ 11ರಂದು ಕಲಬುರಗಿ ಹೈಕೋರ್ಟ್ ಪೀಠ ಪೂಜೆಗೆ ಅನುಮತಿ ನೀಡಿದ ಬೆನ್ನಲ್ಲೇ, ಇಂದು ಸುಪ್ರೀಂ ಕೋರ್ಟ್ ಕೂಡ ಪೂಜೆಗೆ ತಡೆ ನೀಡಲು ನಿರಾಕರಿಸುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ‘ಗ್ರೀನ್ ಸಿಗ್ನಲ್’ ನೀಡಿದೆ.
ಮಹಾಶಿವರಾತ್ರಿಯ ಸಂದರ್ಭದಲ್ಲಿ ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಿದ್ರಾಮಯ್ಯ ಹಿರೇಮಠ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಿಗದಿತ ಸಮಯ ಮತ್ತು ನಿಯಮಗಳ ಅಡಿಯಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ದರ್ಗಾ ಸಮಿತಿಯು ತಕ್ಷಣವೇ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ಪೂಜೆಗೆ ತಡೆ ನೀಡುವಂತೆ ಕೋರಿತ್ತು. ಆದರೆ, ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು ಮತ್ತು ಪೂಜೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿವಾದದ ಹಿನ್ನೆಲೆ:
ಸೂಫಿ ಸಂತ ಲಾಡ್ಲೇ ಮಶಾಕ್ರವರ ಈಗಿರುವ ದರ್ಗಾದ ಆವರಣದಲ್ಲಿ ಸಂತ ರಾಘವ ಚೈತನ್ಯರ ಸಮಾಧಿಯಿದ್ದು, ಅದರ ಮೇಲೆ ಶಿವಲಿಂಗವಿದೆ ಎಂಬುದು ಹಿಂದೂ ಸಂಘಟನೆಗಳ ವಾದ. ಕಳೆದ ಕೆಲವು ವರ್ಷಗಳಿಂದ ಶಿವರಾತ್ರಿಯಂದು ಇಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. 2022ರಲ್ಲಿ ನಡೆದ ಕಲ್ಲು ತೂರಾಟದ ಘಟನೆಯ ನಂತರ, ಈ ಸ್ಥಳವು ಭದ್ರತಾ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ | “ದೆಹಲಿಗೆ ಬಂದಿರೋದು ರಾಜಕೀಯ ಮಾಡೋದಕ್ಕೆ”: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಹೇಳಿಕೆ
ಬಿಗಿ ಭದ್ರತೆ ಮತ್ತು ನಿಯಮಗಳು:
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಆಳಂದ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಹೈಕೋರ್ಟ್ ಆದೇಶದಂತೆ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾ ಇಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
