ಬೆಂಗಳೂರು: ದೀರ್ಘಕಾಲದ ನಾಟಕೀಯ ಬೆಳವಣಿಗೆಗಳ ನಂತರ, ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎದುರಿಸುತ್ತಿದ್ದ ಬಂಧನದ ಭೀತಿಯಲ್ಲಿದ್ದ ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭೈರತಿ ಬಸವರಾಜ್ ಅವರು ಬಂಧನದಿಂದ ಪಾರಾಗಲು ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಇವರ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಅಲರ್ಟ್ ಆಗಿದ್ದರು. ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಭೈರತಿ ಅವರಿಗೆ ಬಂಧನದ ಹಾದಿ ಸುಗಮವಾಯಿತು.
ವಿಮಾನ ನಿಲ್ದಾಣದಲ್ಲಿ ನಾಟಕೀಯ ಬಂಧನ:
ತಲೆಮರೆಸಿಕೊಂಡಿದ್ದ ಭೈರತಿ ಬಸವರಾಜ್ ಅವರು ಬೆಂಗಳೂರಿನಿಂದ ಗುಜರಾತ್ಗೆ ತೆರಳಿದ್ದರು ಎನ್ನಲಾಗಿದೆ. ಪೊಲೀಸರು ಇವರ ವಿರುದ್ಧ ‘ಲುಕ್ ಔಟ್ ನೋಟಿಸ್’ ಜಾರಿ ಮಾಡಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲೇ, ಭೈರತಿ ಅವರು ಬೆಂಗಳೂರಿಗೆ ವಾಪಸ್ಸಾಗಲು ನಿರ್ಧರಿಸಿದರು. ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಹೊಂಚು ಹಾಕಿದ್ದ ಪೊಲೀಸ್ ತಂಡ ಅವರನ್ನು ವಶಕ್ಕೆ ಪಡೆದರು.
ಇದನ್ನೂ ಓದಿ | ಗುತ್ತಿಗೆದಾರರ ಹಿತರಕ್ಷಣೆ ಮರೆತ ಸರ್ಕಾರ – ಆರ್. ಮಂಜುನಾಥ್ ಕಿಡಿ
ಬಂಧನದ ನಂತರ ಸಿಐಡಿ ಕಚೇರಿಗೆ ಕರೆದೊಯ್ಯಲಾದ ಶಾಸಕರನ್ನು ಅಧಿಕಾರಿಗಳು ರಾತ್ರಿಯಿಡೀ ತೀವ್ರ ವಿಚಾರಣೆಗೆ ಒಳಪಡಿಸಿದರು. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಯಾರ ನೆರವು ಪಡೆದಿದ್ದರು ಮತ್ತು ಕೊಲೆ ಪ್ರಕರಣದಲ್ಲಿ ಅವರ ಪಾತ್ರವೇನು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಇಂದು ಬೆಳಿಗ್ಗೆ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಸಿಐಡಿ ತಂಡವು ಶಾಸಕರನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.
