ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಂದರ್ಭದಲ್ಲಿ ಹಾವೇರಿಯಲ್ಲಿ ಆಯೋಜಿಸಲಾಗಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸರ್ಕಾರವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, “ನಮ್ಮ ಸರ್ಕಾರ ಕೇವಲ ಮಾತುಗಳಿಗೆ ಸೀಮಿತವಾಗಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 590 ಭರವಸೆಗಳಲ್ಲಿ ಈಗಾಗಲೇ 234 ಪ್ರಮುಖ ಭರವಸೆಗಳನ್ನು ಈಡೇರಿಸಿದ್ದೇವೆ. ಇದು ನುಡಿದಂತೆ ನಡೆದ ಸರ್ಕಾರ” ಎಂದು ಬೆನ್ನುತಟ್ಟಿಕೊಂಡರು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೋಟಿಗಟ್ಟಲೆ ಜನರ ಬದುಕಿನಲ್ಲಿ ಬದಲಾವಣೆ ತಂದಿವೆ. ನಮ್ಮ ಸಾಧನೆಗಳ ಪಟ್ಟಿ ಎಷ್ಟು ದೊಡ್ಡದಿದೆ ಎಂದರೆ, ಅದನ್ನು ವಿವರಿಸಲು ಒಂದು ದಿನವೂ ಸಾಲುವುದಿಲ್ಲ ಎಂದರು.
ಬಿಜೆಪಿ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ
ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಧೋರಣೆಗಳನ್ನು ಟೀಕಿಸಿದ ಅವರು, ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಹಕ್ಕುಗಳಿಗಾಗಿ ನಾವು ಹೋರಾಡುತ್ತಿದ್ದೇವೆ ಎಂದು ಕಿಡಿಕಾರಿದರು. “ವಿರೋಧ ಪಕ್ಷದವರು ನಮ್ಮ ಯೋಜನೆಗಳನ್ನು ಉಚಿತ ಎಂದು ಟೀಕಿಸುತ್ತಾರೆ, ಆದರೆ ಅವು ಬಡವರ ಬದುಕಿಗೆ ಆಸರೆಯಾಗಿವೆ. ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಸರಿಯಾದ ಸಹಕಾರ ನೀಡುತ್ತಿಲ್ಲ” ಎಂದು ದೂರಿದರು.
ಇದನ್ನೂ ಓದಿ | “ಕೇಂದ್ರದ ಅನುದಾನ ದುರ್ಬಳಕೆ”: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ
ಭೂ ಗ್ಯಾರಂಟಿ ಮತ್ತು ರೈತರಿಗೆ ಸಂದೇಶ
ಹಾವೇರಿಯಲ್ಲಿ ನಡೆದ ಈ ಸಮಾವೇಶದಲ್ಲಿ ರೈತರಿಗೆ ಭೂಮಿಯ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ‘ಭೂ ಗ್ಯಾರಂಟಿ’ಯನ್ನು ಸಾಕಾರಗೊಳಿಸಲಾಯಿತು. ಭೂಹೀನರಿಗೆ ಭೂಮಿ ನೀಡುವುದು ಸಾಮಾಜಿಕ ನ್ಯಾಯದ ಒಂದು ಭಾಗವಾಗಿದೆ ಎಂದು ಅವರು ಪ್ರತಿಪಾದಿಸಿದರು.
