ಚಿತ್ರ ಕೃಪೆ : ಪಬ್ಲಿಕ್ ಟಿವಿ
ಹಂಪಿ (ವಿಜಯನಗರ): ಹಂಪಿ ಉತ್ಸವದ ಆಕರ್ಷಣೆಗಳಲ್ಲಿ ಒಂದಾದ ‘ಬೈ ಸ್ಕೈ’ (ಹೆಲಿಕಾಪ್ಟರ್ ಪ್ರವಾಸ) ಸಾಮಾನ್ಯರಿಗೆ ದುಬಾರಿಯಾದದ್ದು. ಆದರೆ, ಹಂಪಿಯ ವೈಭವವನ್ನು ಆಕಾಶದಿಂದ ನೋಡಬೇಕೆಂಬ ಸರ್ಕಾರಿ ಶಾಲಾ ಮಕ್ಕಳ ಆಸೆಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಸಾಕಾರಗೊಳಿಸಿದ್ದಾರೆ.
ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಹೆಲಿಕಾಪ್ಟರ್ ವೀಕ್ಷಣೆಗೆ ಬಂದಿದ್ದ ಸುಮಾರು 60ಕ್ಕೂ ಹೆಚ್ಚು ಶಾಲಾ ಮಕ್ಕಳ ಕಣ್ಣಲ್ಲಿ ಹೆಲಿಕಾಪ್ಟರ್ ಏರುವ ಹಂಬಲವಿತ್ತು. ಇದನ್ನು ಗಮನಿಸಿದ ಸಚಿವರು, ಮಕ್ಕಳ ಹತ್ತಿರ ಹೋಗಿ “ನೀವೂ ಹೆಲಿಕಾಪ್ಟರ್ನಲ್ಲಿ ಹಾರಾಡಬೇಕಾ?” ಎಂದು ಕೇಳಿದರು. ಮಕ್ಕಳಿಂದ ಒಮ್ಮತದ “ಹೌದು” ಎಂಬ ಉತ್ತರ ಬಂದ ತಕ್ಷಣ, ಸಚಿವರು ಮಕ್ಕಳಿಗಾಗಿ ಉಚಿತ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ | “ಕೇಂದ್ರದ ಅನುದಾನ ದುರ್ಬಳಕೆ”: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ
ಸಚಿವರ ಈ ನಿರ್ಧಾರದಿಂದ 60ಕ್ಕೂ ಹೆಚ್ಚು ಮಕ್ಕಳು ಹೆಲಿಕಾಪ್ಟರ್ ಏರಿ ಹಂಪಿಯ ವಿರೂಪಾಕ್ಷ ದೇವಸ್ಥಾನ, ಕಲ್ಲಿನ ರಥ ಮತ್ತು ತುಂಗಭದ್ರಾ ನದಿಯ ಸೊಬಗನ್ನು ಮೇಲಿಂದ ಕಂಡು ಸಂಭ್ರಮಿಸಿದರು. ಹಣದ ಕೊರತೆಯಿಂದ ಗಗನಕುಸುಮವಾಗಿದ್ದ ಮಕ್ಕಳ ಕನಸನ್ನು ನನಸು ಮಾಡಿದ ಸಚಿವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
