ಪಲ್ಲೆಕೆಲೆ: ಐಸಿಸಿ ಟಿ-20 ವಿಶ್ವಕಪ್ 2026ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತವೊಂದು ಸಂಭವಿಸಿದೆ. ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಗ್ರೂಪ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ. ಮಂಗಳವಾರ (ಫೆ.17) ಇಲ್ಲಿನ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದ ಪರಿಣಾಮ, ಆಸ್ಟ್ರೇಲಿಯಾದ ವಿಶ್ವಕಪ್ ಕನಸು ನುಚ್ಚುನೂರಾಗಿದೆ.
ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಜಿಂಬಾಬ್ವೆ ಮತ್ತು ಐರ್ಲೆಂಡ್ ತಲಾ ಒಂದು ಅಂಕವನ್ನು ಹಂಚಿಕೊಂಡವು. ಈ ಒಂದು ಅಂಕದೊಂದಿಗೆ ಜಿಂಬಾಬ್ವೆ ಒಟ್ಟು 5 ಅಂಕಗಳನ್ನು ಗಳಿಸಿ, ಶ್ರೀಲಂಕಾದೊಂದಿಗೆ ‘ಬಿ’ ಗುಂಪಿನಿಂದ ಅಧಿಕೃತವಾಗಿ ‘ಸೂಪರ್-8’ ಹಂತಕ್ಕೆ ಪ್ರವೇಶಿಸಿತು.
ಇದನ್ನೂ ಓದಿ | ಹಾಲ್ ಟಿಕೆಟ್ ಬಂದರೂ ಪರೀಕ್ಷೆಗೆ ಗೈರಾದ ವೈಭವ್ ಸೂರ್ಯವಂಶಿ!
ಆಸ್ಟ್ರೇಲಿಯಾ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿ 2 ಅಂಕಗಳನ್ನು ಮಾತ್ರ ಹೊಂದಿತ್ತು. ತನ್ನ ಮುಂದಿನ ಪಂದ್ಯದಲ್ಲಿ ಓಮನ್ ವಿರುದ್ಧ ಗೆದ್ದರೂ ಆಸ್ಟ್ರೇಲಿಯಾ ಗರಿಷ್ಠ 4 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯ. ಆದರೆ, ಜಿಂಬಾಬ್ವೆ ಈಗಾಗಲೇ 5 ಅಂಕ ಗಳಿಸಿರುವುದರಿಂದ, ಕಾಂಗರೂ ಪಡೆಗೆ ಮುಂದಿನ ಹಂತಕ್ಕೇರುವ ಎಲ್ಲಾ ಬಾಗಿಲುಗಳು ಮುಚ್ಚಿವೆ. ಈ ಮೂಲಕ ಆಸ್ಟ್ರೇಲಿಯಾ, ಐರ್ಲೆಂಡ್ ಮತ್ತು ಓಮನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಬಲಿಷ್ಠ ಆಸ್ಟ್ರೇಲಿಯಾ ತಂಡವು ಲೀಗ್ ಹಂತದಲ್ಲೇ ನಿರ್ಗಮಿಸಿರುವುದು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.
