ಬೆಂಗಳೂರು: “ಆರ್ಎಸ್ಎಸ್ (RSS) ಒಂದು ದೆವ್ವ, ಬಿಜೆಪಿ ಆ ದೆವ್ವದ ನೆರಳು” ಎಂದು ಟೀಕಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಿಯಾಂಕ್ ಖರ್ಗೆ ಅವರಿಗೆ ‘ಆರ್ಎಸ್ಎಸ್ ವಿರೋಧಿ ಸಿಂಡ್ರೋಮ್’ (Anti-RSS Syndrome) ಎಂಬ ವೈರಸ್ ತಗುಲಿದ್ದು, ಅದಕ್ಕೆ ಚಿಕಿತ್ಸೆ ಅಗತ್ಯವಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಟಿ. ರವಿ, “ಖರ್ಗೆಯವರಿಗೆ ಸಾಂಸ್ಕೃತಿಕ ಮಾರ್ಕ್ಸ್ವಾದಿಗಳು (Cultural Marxists) ಪಾಠ ಮಾಡುತ್ತಿದ್ದಾರೆ. ಅವರ ತಲೆಯಲ್ಲಿ ರಾಷ್ಟ್ರೀಯವಾದದ ಬದಲಿಗೆ ಎಡಪಂಥೀಯ ಸಿದ್ಧಾಂತ ತುಂಬಿಕೊಂಡಿದೆ. ಹೀಗಾಗಿಯೇ ದೇಶಭಕ್ತ ಸಂಘಟನೆಯಾದ ಆರ್ಎಸ್ಎಸ್ ಅವರಿಗೆ ದೆವ್ವದಂತೆ ಕಾಣುತ್ತಿದೆ,” ಎಂದು ಕಿಡಿಕಾರಿದರು.
ಇತಿಹಾಸದ ಪಾಠ ಮಾಡಿದ ರವಿ:
ಆರ್ಎಸ್ಎಸ್ ಸಂಘಟನೆಯನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ, ಇತಿಹಾಸದ ಪುಟಗಳನ್ನು ತೆರೆದಿಟ್ಟರು. “ಮಹಾತ್ಮ ಗಾಂಧೀಜಿಯವರು ಆರ್ಎಸ್ಎಸ್ ಶಿಬಿರಕ್ಕೆ ಭೇಟಿ ನೀಡಿದ್ದರು ಮತ್ತು ಸ್ವಯಂಸೇವಕರ ಶಿಸ್ತು, ಸರಳತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿದ್ದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪುಣೆಯ ಶಿಬಿರಕ್ಕೆ ಭೇಟಿ ನೀಡಿ, ಅಲ್ಲಿ ಜಾತಿಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಊಟ ಮಾಡುವುದನ್ನು ಕಂಡು ಸಂತೋಷಪಟ್ಟಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಉದ್ಯಮಿ ರತನ್ ಟಾಟಾ ಅಂತಹ ಮಹಾನ್ ವ್ಯಕ್ತಿಗಳೇ ಸಂಘದ ಕಾರ್ಯವೈಖರಿಯನ್ನು ಹೊಗಳಿದ್ದಾರೆ. ಹೀಗಿರುವಾಗ, ಪ್ರಿಯಾಂಕ್ ಖರ್ಗೆ ಅವರ ಟೀಕೆಗಳಿಗೆ ಯಾವ ಬೆಲೆಯಿದೆ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ | ಕಾಂಗ್ರೆಸ್ ಸರ್ಕಾರದ 1,000 ದಿನಗಳ ಸಂಭ್ರಮ: “ನುಡಿದಂತೆ ನಡೆದಿದ್ದೇವೆ” ಎಂದ ಸಿದ್ದರಾಮಯ್ಯ
ಖರ್ಗೆ ಹೇಳಿದ್ದೇನು?
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, “ಆರ್ಎಸ್ಎಸ್ ಸಂಘಟನೆಯು ತೆರೆಮರೆಯಲ್ಲಿ ನಿಂತು ಬಿಜೆಪಿಯನ್ನು ನಿಯಂತ್ರಿಸುತ್ತಿದೆ. ಆರ್ಎಸ್ಎಸ್ ಎನ್ನುವುದು ದೆವ್ವವಿದ್ದಂತೆ, ಬಿಜೆಪಿ ಅದರ ನೆರಳು ಮಾತ್ರ. ದೆವ್ವ ಹೇಳಿದಂತೆ ನೆರಳು ಕುಣಿಯುತ್ತದೆ,” ಎಂದು ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
