Free Meals: Revolution at Sri Mahadeshwara College in Kollegal, this is what teachers are doing by spending money from their own pockets! – ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ೨೨ ಮಂದಿ ಶಿಕ್ಷಕರು ತಮ್ಮ ಸ್ವಂತ ಖರ್ಚಿನಿಂದ ಸುಮಾರು ೨೦೦ ಬಡ ವಿದ್ಯಾರ್ಥಿಗಳಿಗೆ ವಾರದಲ್ಲಿ ೩ ದಿನ ಉಚಿತ ಊಟ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಚಾಮರಾಜನಗರ: ಇಂದಿನ ಕಾಲದಲ್ಲಿ ಕಾಲೇಜು ಎಂದರೆ ಬರೀ ಪಾಠ, ಪರೀಕ್ಷೆ, ಅಂಕಗಳು ಮತ್ತು ಫೀಸು ಅಷ್ಟೇ ಎನ್ನುವ ಭಾವನೆ ಜನರಲ್ಲಿದೆ. ಆದರೆ, ಇಲ್ಲೊಂದು ಕಾಲೇಜಿನಲ್ಲಿ ಶಿಕ್ಷಕರು ಬರೀ ಪುಸ್ತಕದ ಪಾಠವನ್ನಷ್ಟೇ ಹೇಳಿಕೊಡುತ್ತಿಲ್ಲ, ಬದಲಿಗೆ ವಿದ್ಯಾರ್ಥಿಗಳ ಹಸಿವನ್ನೂ ನೀಗಿಸಿ ನಿಜವಾದ ‘ಗುರುದೇವೋ ಭವ’ ಎಂಬ ಮಾತಿಗೆ ಅರ್ಥ ತರುತ್ತಿದ್ದಾರೆ. ಹೌದು, ಕೊಳ್ಳೇಗಾಲದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಈ ಕಾರ್ಯ ಎಲ್ಲರ ಮನ ಮುಟ್ಟಿದೆ.
200 ವಿದ್ಯಾರ್ಥಿಗಳಿಗೆ ಊಟ : ಗ್ರಾಮೀಣ ಭಾಗದಿಂದ ಮತ್ತು ತೀರಾ ಬಡತನದ ಹಿನ್ನೆಲೆಯಿಂದ ಕಾಲೇಜಿಗೆ ಬರುವ ನೂರಾರು ವಿದ್ಯಾರ್ಥಿಗಳಿಗೆ ದಿನದ ಮಧ್ಯಾಹ್ನದ ಊಟವೂ ಒಂದು ದೊಡ್ಡ ಸವಾಲಾಗಿತ್ತು. ಹಸಿವಿನಿಂದ ಕಂಗೆಟ್ಟು ಪಾಠ ಕೇಳಲು ಪರದಾಡುತ್ತಿದ್ದ ವಿದ್ಯಾರ್ಥಿಗಳ ಕಷ್ಟವನ್ನು ಕಾಲೇಜಿನ 22 ಮಂದಿ ಶಿಕ್ಷಕರು ಹತ್ತಿರದಿಂದ ಕಂಡರು. ಸುಮ್ಮನೆ ಕೂರಲು ಮನಸ್ಸು ಬಾರದೆ, ತಕ್ಷಣವೇ ಕಾರ್ಯಪ್ರವೃತ್ತರಾದರು.
ಉಚಿತ ಊಟದ ವ್ಯವಸ್ಥೆ : ಈಗ ಈ ಶಿಕ್ಷಕ ಬಳಗ ಸೇರಿ ವಾರದಲ್ಲಿ ಬರೋಬ್ಬರಿ 3 ದಿನ ಸುಮಾರು 200 ವಿದ್ಯಾರ್ಥಿಗಳಿಗೆ ಪೌಷ್ಟಿಕ ಹಾಗೂ ರುಚಿಕರ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇದರಿಂದಾಗಿ ದೂರದ ಊರುಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಿದ್ದಲ್ಲದೆ, ನೆಮ್ಮದಿಯಿಂದ ವಿದ್ಯಾರ್ಜನೆ ಮಾಡಲು ಸಾಧ್ಯವಾಗಿದೆ.
ಜೇಬಿನಿಂದಲೇ ಖರ್ಚು ಮಾಡುತ್ತಿದ್ದಾರೆ ದುಡ್ಡು : ಇಂದಿನ ದಿನಗಳಲ್ಲಿ ತಮಗಾಗಿ ಒಂದೈದು ರೂಪಾಯಿ ಖರ್ಚು ಮಾಡಲು ಯೋಚಿಸುವ ಕಾಲದಲ್ಲಿದ್ದಾರೆ ಜನ. ಆದರೆ, ಈ 22 ಮಂದಿ ಮಾದರಿ ಶಿಕ್ಷಕರು ಪ್ರತಿ ತಿಂಗಳು ತಮ್ಮ ಜೇಬಿನಿಂದಲೇ 1.20 ಲಕ್ಷದಿಂದ 1.44 ಲಕ್ಷ ರೂಪಾಯಿವರೆಗೆ ಹಣವನ್ನು ಹಂಚಿಕೊಂಡು ಭರಿಸುತ್ತಿದ್ದಾರೆ.
ದಿನದ ವೆಚ್ಚ: 200 ವಿದ್ಯಾರ್ಥಿಗಳ ಊಟಕ್ಕೆ ಒಂದು ದಿನಕ್ಕೆ ಸುಮಾರು 10,000 ದಿಂದ 12,000 ವೆಚ್ಚವಾಗುತ್ತದೆ.
ವಾರದ ವೆಚ್ಚ: ವಾರಕ್ಕೆ ಮೂರು ದಿನದ ಲೆಕ್ಕದಲ್ಲಿ 30,000 ದಿಂದ 36,000 ರೂಪಾಯಿ ಖರ್ಚಾಗುತ್ತದೆ.
ಅಡುಗೆ ಸಾಮಗ್ರಿಗಳು: ಅಕ್ಕಿ, ಬೇಳೆ, ತರಕಾರಿ, ಎಣ್ಣೆ, ಮಸಾಲೆ ಪದಾರ್ಥಗಳು ಹಾಗೂ ಅಡುಗೆ ಅನಿಲ ಸೇರಿದಂತೆ ಪ್ರತಿಯೊಂದನ್ನೂ ಈ ಶಿಕ್ಷಕರೇ ತಮ್ಮ ಸ್ವಂತ ವೆಚ್ಚದಲ್ಲಿ ತರುತ್ತಿದ್ದಾರೆ.
