Renukaswamy murder case: Eyewitness of Pattanga Shed who was beaten up in court; ‘I have not seen him’ – ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪ್ರತ್ಯಕ್ಷಸಾಕ್ಷಿ ಪುನೀತ್ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಾರೆ. “ಪಟ್ಟಣಗೆರೆ ಶೆಡ್ನಲ್ಲಿ ನಾನು ಆರೋಪಿಗಳನ್ನು ನೋಡಿಲ್ಲ” ಎಂದು ಅವರು ಹೇಳಿಕೆ ನೀಡಿದ ಕಾರಣ, ಅವರನ್ನು ‘ಹಾಸ್ಟೈಲ್ ಸಾಕ್ಷಿ’ ಎಂದು ಪರಿಗಣಿಸಲಾಗಿದೆ. ಈ ಹೇಳಿಕೆಗೆ ಸರ್ಕಾರಿ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದರ್ಶನ್ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಇತರ ಸಾಕ್ಷಿಗಳ ವಿಚಾರಣೆ ಮುಂದುವರಿದಿದೆ.
- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು.
- ನ್ಯಾಯಾಲಯದಲ್ಲಿ ಪ್ರತ್ಯಕ್ಷಸಾಕ್ಷಿಯೇ ಉಲ್ಟಾ ಹೊಡೆದಿದ್ದಾರೆ.
- ನಾನು ಈ ಆರೋಪಿಗಳನ್ನು ಸ್ಥಳದಲ್ಲಿ ನೋಡಿಲ್ಲ ಎಂದ ಸಾಕ್ಷಿ; ಹಾಸ್ಟೈಲ್ ಸಾಕ್ಷಿಯಾಗಿ ಪರಿವರ್ತನೆ.

ಶೆಡ್ನಲ್ಲಿ ನಾನು ಇವರನೆಲ್ಲಾ ನೋಡಿಲ್ಲ : ” ಜೂನ್ 8 ರಂದು ನಾನು ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದು, ಸಂಜೆ 6.30ವರೆಗೂ ಅಲ್ಲಿಯೇ ಇದ್ದೆ. ಸಂಜೆ ವೇಳೆ ಯಾರೋ ಕಾರಿನಲ್ಲಿ ಬಂದು ದೂರದ ಮರದ ಬಳಿ ಹೋದಂತೆ ಕಾಣಿಸಿತು. ಆ ಬಳಿಕ ನಾನು ಮಲೆಮಹಾದೇಶ್ವರ ಬೆಟ್ಟಕ್ಕೆ ಹೋದನು. ಮಲ್ಲಿಕಾರ್ಜುನ್, ಬಸವರಾಜ್, ಕಿರಣ್ ಹಾಗೂ ಸೆಕ್ಯುರಿಟಿ ಗಾರ್ಡ್ ಇದ್ದರು. ಈ ಆರೋಪಿಗಳನ್ನೂ ನಾನು ನೋಡಿಲ್ಲ ಎಂದು ” ಪುನೀತ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಅವರನ್ನ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲಾಗುತ್ತದೆ.ಉಲ್ಟಾ ಹೊಡೆದಿದಕ್ಕೆ ಸರ್ಕಾರಿ ವಕೀಲರು ಆಕ್ಷೇಪ : ಪ್ರತ್ಯಕ್ಷ ಸಾಕ್ಷಿ ಎಂದು ತನಿಖೆ ವೇಳೆ ಗುರುತಿಸಿದ್ದ ವ್ಯಕ್ತಿಯೇ ಈಗ ನಾನು ಯಾರನ್ನೂ ನೋಡಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವುದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನೆಗೆ ಮುಂದಾದರು. ನಟ ದರ್ಶನ್ ಪರ ವಕೀಲರು ಪ್ರಶ್ನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ನಂತರ ಇತರೆ ಸಾಕ್ಷಿಗಳ ಹೇಳಿಕೆ ದಾಖಲು ಮುಂದುವರೆದಿದೆ.ಹಾಸ್ಟೈಲ್ ಸಾಕ್ಷಿ ಎಂದರೆ ಏನು?
ನ್ಯಾಯಾಲಯದಲ್ಲಿ ಒಂದು ನಿರ್ದಿಷ್ಟ ಪಕ್ಷದ ಹೆಚ್ಚಾಗಿ ಪ್ರಾಸಿಕ್ಯೂಷನ್ ಅಥವಾ ಸರ್ಕಾರದ ಪರವಾಗಿ ಸಾಕ್ಷಿ ಹೇಳಲು ಬಂದ ವ್ಯಕ್ತಿಯು, ನ್ಯಾಯಾಧೀಶರ ಮುಂದೆ ತನ್ನ ಹಿಂದಿನ ಹೇಳಿಕೆಯನ್ನು ಬದಲಾಯಿಸಿ, ತಾನು ಯಾರ ಪರವಾಗಿ ಸಾಕ್ಷಿ ಹೇಳಬೇಕಿತ್ತೋ ಅವರ ವಿರುದ್ಧವಾಗಿಯೇ ಹೇಳಿಕೆ ನೀಡಿದರೆ ಅಂತಹ ಸಾಕ್ಷಿಯನ್ನು ‘ಹಾಸ್ಟೈಲ್ ಸಾಕ್ಷಿ’ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ, ಒಬ್ಬ ವ್ಯಕ್ತಿಯು ಕೊಲೆ ಪ್ರಕರಣವೊಂದನ್ನು ಕಣ್ಣಾರೆ ನೋಡಿ, ಪೊಲೀಸರ ಮುಂದೆ “ಈ ವ್ಯಕ್ತಿಯೇ ಕೊಲೆ ಮಾಡಿದ್ದಾನೆ” ಎಂದು ಹೇಳಿಕೆ ನೀಡಿರುತ್ತಾನೆ. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ, “ನಾನು ಕೊಲೆ ಮಾಡಿದ್ದನ್ನು ನೋಡಿಲ್ಲ, ಪೊಲೀಸರು ಬಲವಂತವಾಗಿ ನನ್ನಿಂದ ಸಹಿ ಪಡೆದಿದ್ದರು” ಎಂದು ಹೇಳಿದರೆ, ಆ ಸಾಕ್ಷಿಯನ್ನು ಪ್ರಾಸಿಕ್ಯೂಷನ್ ‘ಹಾಸ್ಟೈಲ್’ ಎಂದು ಘೋಷಿಸುತ್ತದೆ.
ಒಬ್ಬ ಸಾಕ್ಷಿ ಹಾಸ್ಟೈಲ್ ಆದ ತಕ್ಷಣ ಆತನ ಸಂಪೂರ್ಣ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸುವುದಿಲ್ಲ. ಆತ ಹೇಳಿದ ಮಾತುಗಳಲ್ಲಿ ಯಾವುದು ಸತ್ಯ ಮತ್ತು ನಂಬಲರ್ಹ ಎಂದು ನ್ಯಾಯಾಧೀಶರಿಗೆ ಅನ್ನಿಸುತ್ತದೆಯೋ, ಅಷ್ಟು ಭಾಗವನ್ನು ಮಾತ್ರ ತೀರ್ಪು ನೀಡುವಾಗ ಪರಿಗಣಿಸುವ ಅಧಿಕಾರ ನ್ಯಾಯಾಲಯಕ್ಕಿರುತ್ತದೆ.
