HDK is behind the sting operation against Siddaramaiah. A plot to kill two birds with one stone: a serious allegation by Minister Krishna Byre Gowda! – ಸ್ಟಿಂಗ್ ವಿಡಿಯೋ ಬಿಡುಗಡೆಯ ಸಂಪೂರ್ಣ ಸಂಚು ದೆಹಲಿಯಲ್ಲಿರುವ ಕೇಂದ್ರ ಸಚಿವರ ಅಧಿಕೃತ ನಿವಾಸದಲ್ಲೇ ನಡೆದಿದೆ. ಕುಮಾರಸ್ವಾಮಿ ಅವರ ಸೋಶಿಯಲ್ ಮೀಡಿಯಾ ತಂಡ ಇದರಲ್ಲಿ ನೇರವಾಗಿ ಭಾಗಿಯಾಗಿದೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಡುಗಡೆ ಮಾಡಲಾದ ವಿವಾದಾತ್ಮಕ ಸ್ಟಿಂಗ್ ಆಪರೇಷನ್ ವಿಡಿಯೋ ಹಿಂದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಸ್ಟಿಂಗ್ ವಿಡಿಯೋ ಬಿಡುಗಡೆಯ ಸಂಪೂರ್ಣ ಸಂಚು ದೆಹಲಿಯಲ್ಲಿರುವ ಕೇಂದ್ರ ಸಚಿವರ ಅಧಿಕೃತ ನಿವಾಸದಲ್ಲೇ ನಡೆದಿದೆ. ಕುಮಾರಸ್ವಾಮಿ ಅವರ ಸೋಶಿಯಲ್ ಮೀಡಿಯಾ ತಂಡ ಇದರಲ್ಲಿ ನೇರವಾಗಿ ಭಾಗಿಯಾಗಿದೆ. ಸಿದ್ದರಾಮಯ್ಯ ಅವರ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಮತ್ತು ಈ ಸಂಚಿನ ಆಪಾದನೆಯನ್ನು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಹೊರಿಸಿ ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ’ ಹೊಡೆಯುವುದು ಕುಮಾರಸ್ವಾಮಿ ಅವರ ಸಂಚಾಗಿತ್ತು ಎಂದು ದೂರಿದ್ದಾರೆ.
ರಾಜಕೀಯ ಕುತಂತ್ರದ ಮಾಸ್ಟರ್ ಸ್ಟ್ರೋಕ್ ಇದು. ಕೆಲವೊಮ್ಮೆ ನೈಜ ಜೀವನದ ಘಟನೆಗಳು ಕಾಲ್ಪನಿಕ ಕಥೆಗಳಿಗಿಂತಲೂ ವಿಚಿತ್ರವಾಗಿರುತ್ತವೆ. ಇತರರ ಮೇಲಿನ ದ್ವೇಷ ಮತ್ತು ಅಸಹಿಷ್ಣುತೆಯಿಂದ ಇದೆಲ್ಲವನ್ನೂ ಮಾಡಲಾಗಿದೆಯೇ ಎಂದೂ ಪ್ರಶ್ನಿಸಿದ್ದಾರೆ.
ಇದೇ ವೇಳೆ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕೂಡ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಅನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಬರೆದು, ನಿರ್ದೇಶಿಸಿ, ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ನಾಯಕನೊಂದಿಗೆ ಕೆಲಸ ಮಾಡುವವರೇ ಈ ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ ಎಂದೂ ದೂರಿದ್ದಾರೆ.
2028ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತಂದು, ಕಾಂಗ್ರೆಸ್ ವಿರೋಧಿ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕುಮಾರಸ್ವಾಮಿ ಈ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.
ಕುಮಾರಸ್ವಾಮಿ ಅವರ ಆಪ್ತರಾದ ಪ್ರಜ್ವಲ್ ಪ್ರಸಾದ್, ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಅವರು ಮೊಬೈಲ್ ಫೋನ್ಗಳನ್ನು ಖರೀದಿಸಿ ವಿಡಿಯೊ ಅಪ್ಲೋಡ್ ಮಾಡುವಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಪಕ್ಷಕ್ಕೆ ಲಭ್ಯವಾಗಿರುವ ಮಾಹಿತಿಯನ್ನು ಉಲ್ಲೇಖಿಸಿರುವ ಲಕ್ಷ್ಮಣ್ ಅವರು, ಈ ಮೂವರ ನಡುವೆ ಮೂರು ಪ್ರತ್ಯೇಕ ದಿನಾಂಕಗಳಲ್ಲಿ ಒಟ್ಟು 29.30 ಲಕ್ಷ ರೂ. ಹಣಕಾಸಿನ ವಹಿವಾಟು ನಡೆದಿದೆ ಎಂದು ಆರೋಪಿಸಿದ್ದಾರೆ.
ವಿಡಿಯೊವನ್ನು ಕೇಂದ್ರ ಸಚಿವರ ನವದೆಹಲಿಯ ಅಧಿಕೃತ ನಿವಾಸದಲ್ಲಿ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಕುಮಾರಸ್ವಾಮಿ ಸ್ಥಳದಲ್ಲೇ ಇದ್ದರು ಎಂದು ಪಾಂಡೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಲಕ್ಷ್ಮಣ್ ಪ್ರತಿಪಾದಿಸಿದ್ದಾರೆ. ಅಲ್ಲದೆ, 2011ರಲ್ಲಿ ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ಘಟನೆಯ ಕುರಿತು ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆಯೂ ಪ್ರಶ್ನೆ ಎತ್ತಿರುವ ಅವರು, ಆಕೆ ಕಳುಹಿಸಿದ್ದಾಳೆ ಎನ್ನಲಾದ ಇಮೇಲ್ ದೂರಿನ ಪ್ರತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.
2011ರಲ್ಲಿ ಇಂತಹ ಸ್ಟಿಂಗ್ ಆಪರೇಷನ್ ನಡೆದಿದ್ದರೆ ಮೂಲ ವಿಡಿಯೊವನ್ನು ಬಿಡುಗಡೆ ಮಾಡಲಿ. ದಾಖಲೆಗಳಿಲ್ಲದೆ ಕೇವಲ ಆರೋಪಗಳನ್ನು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಲಕ್ಷ್ಮಣ್ ಹೇಳಿದ್ದಾರೆ.
