Menace of illegal PGs in the ‘Silicon City’: GBA prepares to implement new regulations to bring them under control! – ನಿಯಮ ಉಲ್ಲಂಘನೆಗಳ ವಿರುದ್ಧ ವಾಸ್ತವದಲ್ಲಿ ಯಾವುದೇ ಗಮನಾರ್ಹ ಕ್ರಮಗಳು ನಡೆದಿಲ್ಲ. ಪರಿಷ್ಕೃತ ನೀತಿ ಅಥವಾ ಎಸ್ಒಪಿ ರೂಪಿಸುವ ಪ್ರಸ್ತಾಪವಿದ್ದರೂ, 2024ರ ಮಾರ್ಗಸೂಚಿಗಳನ್ನು ಬಹಿರಂಗವಾಗಿಯೇ ಉಲ್ಲಂಘಿಸಲಾಗುತ್ತಿದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ತನ್ನ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಸಾವಿರಕ್ಕೂ ಹೆಚ್ಚು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳನ್ನು ನಿಯಂತ್ರಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರೂಪಿಸುತ್ತಿದೆ. ಆದರೆ, ಅನಧಿಕೃತ ಪಿಜಿಗಳ ವಿರುದ್ಧ ಹಲವು ವರ್ಷಗಳಿಂದ ಧ್ವನಿ ಎತ್ತುತ್ತಿರುವ ನಾಗರಿಕ ಹೋರಾಟಗಾರರು ಮತ್ತು ಸ್ವಯಂಸೇವಾ ಸಂಸ್ಥೆಗಳು, ಪ್ರಸ್ತಾಪಿತ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಬಿಎ ನಡೆಸಿದ ಪರಿಶೀಲನೆಯ ಪ್ರಕಾರ, ನಗರದಲ್ಲಿ 3,597 ಅನಧಿಕೃತ ಪಿಜಿಗಳಿವೆ. ಕಳೆದ ಒಂದು ದಶಕದಿಂದ ನಗರದಲ್ಲಿ ಪಿಜಿ ನಿಯಮಗಳ ಉಲ್ಲಂಘನೆ ವ್ಯಾಪಕವಾಗಿ ನಡೆಯುತ್ತಿದ್ದರೂ, ಜಿಬಿಎ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದು ಪದೇಪದೇ ಹೈಕೋರ್ಟ್ ನೀಡಿದ ಕಠಿಣ ಸೂಚನೆಗಳ ನಂತರವೇ ಎಂದು ಬೆಂಗಳೂರು ಕೊಯಲಿಷನ್ನ ರಾಜಗೋಪಾಲನ್ ಆರ್. ಹೇಳಿದ್ದಾರೆ.
ನಿಯಮ ಉಲ್ಲಂಘನೆಗಳ ವಿರುದ್ಧ ವಾಸ್ತವದಲ್ಲಿ ಯಾವುದೇ ಗಮನಾರ್ಹ ಕ್ರಮಗಳು ನಡೆದಿಲ್ಲ. ಪರಿಷ್ಕೃತ ನೀತಿ ಅಥವಾ ಎಸ್ಒಪಿ ರೂಪಿಸುವ ಪ್ರಸ್ತಾಪವಿದ್ದರೂ, 2024ರ ಮಾರ್ಗಸೂಚಿಗಳನ್ನು ಬಹಿರಂಗವಾಗಿಯೇ ಉಲ್ಲಂಘಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಸತಿ ಪ್ರದೇಶಗಳಲ್ಲಿ ಪಿಜಿಗಳ ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ವಲಯ ನಿಯಮಾವಳಿಗಳನ್ನು ತಿದ್ದುಪಡಿ ಮಾಡಬೇಕು. ಅಲ್ಲದೆ, ಹಾಸ್ಟೆಲ್ಗಳಿಗಿಂತ ಭಿನ್ನವಾಗಿರುವ ಪಿಜಿಗಳಿಗೆ ಜಿಬಿಎ ಪ್ರತ್ಯೇಕ ವರ್ಗೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ನಗರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪಿಜಿಗಳು ಕಡಿಮೆ ವೆಚ್ಚದ ವಸತಿ ವ್ಯವಸ್ಥೆಯಾಗಿವೆ. ಹೀಗಾಗಿ ಇವುಗಳನ್ನು ನಿರ್ಬಂಧಿಸಬಾರದು ಎಂದು ಪಿಜಿ ಮಾಲೀಕರ ಸಂಘ ಸಮರ್ಥಿಸಿಕೊಂಡಿದೆ.
ಆದರೆ, ಈ ವಾದವನ್ನು ಒಪ್ಪದ ಬೆಂಗಳೂರಿನ ನಾಗರಿಕರ ವೇದಿಕೆಯ ಸಂಚಾಲಕ ಸಂದೀಪ್ ಅನಿರುದ್ಧನ್, ಅಕ್ರಮ ಪಿಜಿಗಳ ಹಾವಳಿ ಮತ್ತು ಕಟ್ಟಡ ನಿಯಮಗಳ ಉಲ್ಲಂಘನೆ ರಾಜ್ಯದ ಎರಡು ಮೂಲಭೂತ ವೈಫಲ್ಯಗಳಾದ ಯೋಜನಾರಹಿತ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತದ ಪರಿಣಾಮ ಎಂದು ಹೇಳಿದ್ದಾರೆ.
ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ, ಉಳಿದ ಕ್ರಮಗಳೆಲ್ಲವೂ ಕೇವಲ ಮೇಲ್ನೋಟದ ಬದಲಾವಣೆಗಳಾಗಲಿವೆ. ಬೆಂಗಳೂರು ವೇಗವಾಗಿ ಕೊಳಗೇರಿ ನಗರವಾಗಿ ಬದಲಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
