"Exercise restraint when speaking about senior leaders; the arrogance of power does not last long"—C.B. Suresh Babu and T.A. Sharavana hit back at Priyank Kharge - ಗ್ರಾಮೀಣ ಜನರ ಬಗ್ಗೆ ಕೀಳು ಅಭಿರುಚಿಯ ಮನಸ್ಥಿತಿ ಪ್ರದರ್ಶಿಸಿರುವುದು ಖರ್ಗೆ ಅವರ ಘನತೆಗೆ ತಕ್ಕುದಲ್ಲ
ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಹೋರಾಟ ಮತ್ತು ಜನಸೇವೆಯನ್ನು ಹಗುರವಾಗಿ ಪರಿಗಣಿಸುವುದು ನಿಮಗೆ ಶೋಭೆ ತರುವುದಿಲ್ಲ.
ಬೆಂಗಳೂರು, ನವೆಂಬರ್ 5: ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಸಚಿವರಾಗಿ, ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಗೌರವ ಮತ್ತು ಘನತೆ ಹೊಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಾಗಿ ಕನಿಷ್ಠ ರಾಜಕೀಯ ಸಂಸ್ಕೃತಿ ಮತ್ತು ಸಭ್ಯತೆಯನ್ನು ಮೈಗೂಡಿಸಿಕೊಳ್ಳಬೇಕಿತ್ತು. ಆದರೆ ಜೆಡಿಎಸ್ ಹಿರಿಯ ನಾಯಕರು ಹಾಗೂ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಬಳಸಿರುವ ಭಾಷೆ ಅವರ ಮನಸ್ಥಿತಿ ತೋರಿಸುತ್ತದೆ , ದುರಹಂಕಾರ ಮತ್ತು ರಾಜಕೀಯ ಅಸಹನೆಯ ಪ್ರತೀಕವಾಗಿದೆ ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮತ್ತು ಜೆಡಿಎಸ್ ಹಿರಿಯ ನಾಯಕ, ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ. ಶರವಣ ಅವರು ತೀವ್ರವಾಗಿ ಖಂಡಿಸಿದ್ದಾರೆ.
‘ಹಳ್ಳಿ ಗುಗ್ಗು’ ಎಂಬ ಅರ್ಥ ಬರುವ ಪದಗಳನ್ನು ಬಳಸುವ ಮೂಲಕ ಗ್ರಾಮೀಣ ಜನರ ಬಗ್ಗೆ ತಮಗಿರುವ ತಾತ್ಸಾರ ಮನೋಭಾವವನ್ನು ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಿದ್ದಾರೆ. ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ಕೃಷಿ ಮಾಡಿಕೊಂಡು, ಬೆವರು ಸುರಿಸಿ ಬದುಕು ಕಟ್ಟಿಕೊಳ್ಳುವ ಜನರೇ ಈ ನಾಡಿನ ನಿಜವಾದ ಶಕ್ತಿ. ಅಂತಹ ಜನರ ಬದುಕು, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಅವಮಾನಿಸುವುದು ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ಹಳ್ಳಿಯ ಜನರ ಬೆಂಬಲದಿಂದಲೇ ಅಧಿಕಾರಕ್ಕೆ ಬಂದಿರುವವರು ಅದೇ ಹಳ್ಳಿಯ ಜನರನ್ನು ಅವಹೇಳನ ಮಾಡುವುದು ವಿಪರ್ಯಾಸ.
ಕುಮಾರಸ್ವಾಮಿ ಅವರ ರಾಜಕೀಯ ಇತಿಹಾಸ ನಿಮಗೆ ಗೊತ್ತಿದೆಯೇ?
ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ನಿನ್ನೆ ಮೊನ್ನೆ ಬಂದವರಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ, ರಾಜ್ಯದ ಜನರಿಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದವರು. ರೈತರ ಸಾಲಮನ್ನಾ, ಗ್ರಾಮೀಣಾಭಿವೃದ್ಧಿ, ಬಡವರ ಪರವಾದ ಆಡಳಿತದ ಮೂಲಕ ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿರುವ ನಾಯಕರು. ಇಂದು ದೇಶದ ಕೇಂದ್ರ ಸಚಿವರಾಗಿ ಕರ್ನಾಟಕದ ಹಿತಾಸಕ್ತಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಅಂತಹ ಹಿರಿಯ ನಾಯಕರ ರಾಜಕೀಯ ಸಾಧನೆ, ಅನುಭವ ಮತ್ತು ಜನಪ್ರಿಯತೆಯನ್ನು ವೈಯಕ್ತಿಕ ನಿಂದನೆಯ ಮೂಲಕ ಕುಗ್ಗಿಸಲು ಸಾಧ್ಯವಿಲ್ಲ.
ಹಿರಿಯರ ಬಗ್ಗೆ ಮಾತನಾಡುವಾಗ ನಿಮ್ಮ ತಂದೆಯ ರಾಜಕೀಯ ಸಂಸ್ಕೃತಿಯನ್ನಾದರೂ ನೆನಪಿಸಿಕೊಳ್ಳಿ!
ಮಲ್ಲಿಕಾರ್ಜುನ ಖರ್ಗೆ ಅವರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ದುಡಿದು, ವಿವಿಧ ಹಂತಗಳಲ್ಲಿ ಜನಪ್ರತಿನಿಧಿಯಾಗಿ ಬೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ರಾಜಕೀಯ ಅನುಭವ ಮತ್ತು ಹೋರಾಟದ ಹಿನ್ನೆಲೆಯನ್ನು ನಾವು ಗೌರವಿಸುತ್ತೇವೆ. ಆದರೆ ಅವರ ಪುತ್ರನಾಗಿ ನೀವು ತೋರಬೇಕಾದ ರಾಜಕೀಯ ಪ್ರಬುದ್ಧತೆ ಮತ್ತು ಸಂಯಮವನ್ನು ಮರೆತು ಹಿರಿಯ ನಾಯಕರ ಬಗ್ಗೆ ಭಾಷೆ ಬಳಸುವುದು ನಿಮ್ಮ ತಂದೆಯ ಸಾರ್ವಜನಿಕ ಜೀವನದ ಘನತೆಗೂ ಧಕ್ಕೆ ತರುವಂತಹದ್ದು.
ಹಳ್ಳಿಯ ಜನರನ್ನು ಅವಮಾನಿಸುವುದು ಕಾಂಗ್ರೆಸ್ನ ಮನಸ್ಥಿತಿಯೇ?
ಕಾಂಗ್ರೆಸ್ ಪಕ್ಷಕ್ಕೆ ಗ್ರಾಮೀಣ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಹಳ್ಳಿಗಳಲ್ಲಿ ಬದುಕುತ್ತಿರುವ ರೈತರ ಸಮಸ್ಯೆಗಳಿಗೆ ಉತ್ತರ ನೀಡಲಿ. ಹಾಲಿನ ದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಸಂಕಷ್ಟ, ನಿರುದ್ಯೋಗ ಮತ್ತು ಜನಸಾಮಾನ್ಯರ ಬದುಕಿನ ಸಮಸ್ಯೆಗಳ ಬಗ್ಗೆ ಮಾತನಾಡಲಿ. ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ವಿರೋಧ ಪಕ್ಷದ ನಾಯಕರನ್ನು ವೈಯಕ್ತಿಕವಾಗಿ ನಿಂದಿಸುವುದು ಕಾಂಗ್ರೆಸ್ ನಾಯಕರ ಹತಾಶೆಯನ್ನು ತೋರಿಸುತ್ತದೆ.
ವಿಮರ್ಶೆಗೆ ಉತ್ತರ ನೀಡಿ, ವೈಯಕ್ತಿಕ ನಿಂದನೆಗೆ ಇಳಿಯಬೇಡಿ!
ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸುವುದು ವಿರೋಧ ಪಕ್ಷದ ಕರ್ತವ್ಯ. ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು, ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ನಮ್ಮ ಜವಾಬ್ದಾರಿ. ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಿದರೆ ಅದಕ್ಕೆ ಅಂಕಿ-ಅಂಶಗಳ ಮೂಲಕ ಉತ್ತರ ನೀಡಲಿ. ನೀತಿಗಳ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ಹಳ್ಳಿ, ಗ್ರಾಮೀಣ ಬದುಕು ಮತ್ತು ವ್ಯಕ್ತಿತ್ವವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ.
ಅಧಿಕಾರದ ಅಹಂಕಾರಕ್ಕೆ ಇತಿಹಾಸವೇ ಉತ್ತರ ನೀಡಿದೆ!
ಪ್ರಿಯಾಂಕ್ ಖರ್ಗೆ ಅವರೇ, ರಾಜಕಾರಣ ಯಾರ ಸ್ವತ್ತೂ ಅಲ್ಲ. ಅಧಿಕಾರ ಶಾಶ್ವತವಲ್ಲ, ರಾಜಕೀಯ ಸ್ಥಾನಮಾನಗಳು ಶಾಶ್ವತವಲ್ಲ. ಜನರ ತೀರ್ಪಿನ ಮುಂದೆ ಎಂತಹ ದೊಡ್ಡ ರಾಜಕೀಯ ನಾಯಕರೂ ತಲೆಬಾಗಲೇಬೇಕು. ರಾಜಕೀಯದಲ್ಲಿ ಎಷ್ಟೋ ಪ್ರಭಾವಿ ನಾಯಕರು ಕಾಲದ ಪರೀಕ್ಷೆಯಲ್ಲಿ ಹಿಂದೆ ಸರಿದಿದ್ದಾರೆ. ನಿಮ್ಮ ರಾಜಕೀಯ ಅಸ್ತಿತ್ವವೂ ಜನರ ಆಶೀರ್ವಾದ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಿಂದಲೇ ಬಂದಿದೆ ಎಂಬುದನ್ನು ಮರೆಯಬೇಡಿ.
ನೀವು ಬಳಸುವ ಪ್ರತಿಯೊಂದು ಪದವೂ ನಿಮ್ಮ ರಾಜಕೀಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರುವವರು ಮಾತಿನ ಮೇಲೆ ಹಿಡಿತ ಹೊಂದಿರಬೇಕು. ಅಧಿಕಾರದ ಮದದಲ್ಲಿ ಹಿರಿಯ ನಾಯಕರನ್ನು ಹಗುರವಾಗಿ ಕಾಣುವುದು, ಗ್ರಾಮೀಣ ಜನರನ್ನು ಅವಮಾನಿಸುವುದು ಮತ್ತು ರಾಜಕೀಯ ಎದುರಾಳಿಗಳ ವಿರುದ್ಧ ವೈಯಕ್ತಿಕ ನಿಂದನೆ ಮಾಡುವುದು ನಿಮ್ಮ ಘನತೆಯನ್ನು ಹೆಚ್ಚಿಸುವುದಿಲ್ಲ.
ಪ್ರಿಯಾಂಕ್ ಖರ್ಗೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಗ್ರಾಮೀಣ ಜನತೆ ಹಾಗೂ ಹಿರಿಯ ನಾಯಕರ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ರಾಜಕೀಯವಾಗಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಎದುರಿಸುವ ತಾಕತ್ತಿದ್ದರೆ ವಿಚಾರಗಳ ಮೂಲಕ ಎದುರಿಸಲಿ. ವೈಯಕ್ತಿಕ ನಿಂದನೆ ಮತ್ತು ಅಹಂಕಾರದ ಮಾತುಗಳಿಂದಲ್ಲ ಎಂದು ಇಬ್ಬರೂ ನಾಯಕರು ಎಚ್ಚರಿಕೆ ನೀಡಿದ್ದಾರೆ.

